ಬೆಂಗಳೂರು, ನ.26- ಸಾರ್ವಜನಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜೀನಾಮೆ ಸಹಿತ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೃಹತ್ ಐಕ್ಯತಾ ಮೆರವಣಿಗೆ ನಡೆಸಲಾಯಿತು.
ಸಂಗೊಳ್ಳಿ ರಾಯಣ್ಣ ನಿಲ್ದಾಣದ ಮುಂಭಾಗ ಜಮಾಯಿಸಿದ ದಲಿತ ಪರ ಮುಖಂಡರು, ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ನಡೆಸಿದರು.
ಅಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ ಹಿರಿಯ ವಕೀಲ ಡಾ.ಸಿ.ಎಸ್. ದ್ವಾರಕಾನಾಥ್, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಬರೆದಿಲ್ಲ ಎಂದು ಪ್ರಚಾರ ನಡೆಸಲು ಪ್ರಯತ್ನ ನಡೆಯುತ್ತಿದೆ. ಇದನ್ನು ನಾವು ವಿಫಲಗೊಳಿಸಬೇಕು ಎಂದು ಕರೆ ನೀಡಿದರು.
ಹಿರಿಯ ಮುಖಂಡ ಬಿ.ಗೋಪಾಲ್ ಮಾತನಾಡಿ, ಶಾಲೆಗಳಲ್ಲಿ ಇದೇ 26ರಂದು ಸಂವಿಧಾನ ದಿನ ಆಚರಿಸಬೇಕು ಹಾಗೂ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೆ ರಚಿಸಿಲ್ಲ ಎನ್ನುವ ವಿಷಯ ಕುರಿತು ಚರ್ಚೆ ನಡೆಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಉಮಾಶಂಕರ್ ಅವರು ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದರು. ಅವರು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.
ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ರಚಿಸಿಲ್ಲ ಎನ್ನುವುದಾದರೆ ರಚಿಸಿದವರಾರು ಎನ್ನುವುದನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಉಮಾಶಂಕರ್ ಬಹಿರಂಗ ಪಡಿಸಬೇಕು. ಇಲ್ಲವಾದಲ್ಲಿ ಸುತ್ತೋಲೆ ಹೊರಡಿಸಿದ ಅವರನ್ನು ಸರ್ಕಾರ ಗಡಿಪಾರು ಮಾಡಬೇಕು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಗಮನಕ್ಕೆ ಬಾರದೆ ಸುತ್ತೋಲೆ ಹೊರಡಿಸಲು ಸಾಧ್ಯವಿರುವುದಿಲ್ಲ. ಅಚಾತುರ್ಯದ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ದಸಂಸ ಮುಖಂಡ ಮಾರಪ್ಪ, ರಾಜ್ಯದ ಎಲ್ಲ ಶಾಲೆಗಳಲ್ಲಿಸಂವಿಧಾನ ದಿನ ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹೊರಡಿಸಿದ ಸುತ್ತೋಲೆಯ ಹಿನ್ನೆಲೆಯಲ್ಲಿ ಆಚರಣೆಗೆ ಪೂರಕವಾಗಿ ಏನೆಲ್ಲ ಚಟುವಟಿಕೆಗಳು ನಡೆಯಬೇಕು ಎಂದು ಸಿಎಂಸಿಕೆ ಕೈಪಿಡಿ ಪ್ರಕಟಿಸಿತ್ತು. ಈ ಕೈಪಿಡಿಯಲ್ಲಿ ಸಂವಿಧಾನವನ್ನು ಕೇವಲ ಅಂಬೇಡ್ಕರ್ ಅವರು ಬರೆದಿಲ್ಲ’ ಎನ್ನುವುದನ್ನು ಪದೇ ಪದೇ ಉಲ್ಲೇಖಿಸಲಾಗಿದೆ. ಹೀಗೆ ತಪ್ಪು ಸಂದೇಶ ಸಾರುವ ಕೈಪಿಡಿಯನ್ನು ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದೆ. ದಲಿತ ಹಾಗೂ ಅಂಬೇಡ್ಕರ ವಿರೋಧಿಯಾಗಿರುವ ಸಿಎಂಸಿಎ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಶಿಕ್ಷಣ ಆಯುಕ್ತ ಉಮಾಶಂಕರ್ ಹಾಗೂ ಕಾರ್ಯದರ್ಶಿ ಜಗದೀಶ್ ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜ್ಞಾನ ಪ್ರಕಾಶ ಸ್ವಾಮೀಜಿ, ನೂರುಲ್ಲಾ ಷಾ ಖಾದ್ರಿ, ಸೇವಾಲಾಲ್ ಮಹಾಸ್ವಾಮೀಜಿ, ಲಕ್ಷ್ಮಿ ನಾರಾಯಣ ನಾಗವಾರ, ಎಚ್.ಮಾರಪ್ಪ, ಮಹದೇವಸ್ವಾಮಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.