ಶಕ್ತಿ ಯೋಜನೆ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ: ಬಿವೈ ವಿಜಯೇಂದ್ರ

Shakti Yojana is leading state to bankruptcy: BY Vijayendra

ಬೆಂಗಳೂರು 28: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆಯು ಪಾರ್ಶ್ವವಾಯುವಿಗೆ ತುತ್ತಾಗಿದೆ, ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ಒಂದು ಕಾಲದಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿದ್ದ ಕರ್ನಾಟಕದ ಸಾರಿಗೆ ಇಲಾಖೆಯನ್ನು ಆರ್ಥಿಕವಾಗಿ ಕುಗ್ಗಿಸಿದ ಕೀರ್ತಿಗೆ ಕಾಂಗ್ರೆಸ್ ಸರ್ಕಾರ ಪಾತ್ರವಾಗಿದೆ. ಇಲಾಖೆಯ ಅಧೀನದಲ್ಲಿರುವ ನಾಲ್ಕು ನಿಗಮಗಳ ಬಾಕಿ ಮೊತ್ತ 6,468 ಕೋಟಿ ರೂ.ಗೂ ಹೆಚ್ಚಿದ್ದು, ತೀವ್ರ ಆರ್ಥಿಕ ನಷ್ಟದಲ್ಲಿ ಮುಳುಗಿವೆ ಎಂದರು.

'ಕಳೆದ ವೇತನ ಪರಿಷ್ಕರಣೆಯಾಗಿ 38 ತಿಂಗಳು ಕಳೆದಿದ್ದರೂ, ಬಾಕಿ ಪಾವತಿ ಹಾಗೆಯೇ ಉಳಿದಿದೆ. ಶಕ್ತಿ ಯೋಜನೆಯು ಈ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸಿದೆ, ಇಲಾಖೆಯನ್ನು ದಿವಾಳಿಯ ಅಂಚಿಗೆ ದೂಡಿದೆ. ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟವನ್ನು ಪರಿಹರಿಸಲು ಮತ್ತು ನೌಕರರ ಬಾಕಿ ಮೊತ್ತ ಪಾವತಿಯನ್ನು ಇತ್ಯರ್ಥಪಡಿಸಲು ಸರ್ಕಾರ ವಿಫಲವಾದರೆ ವ್ಯಾಪಕ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ. ಈ ಸರ್ಕಾರದ ನಾಚಿಕೆಗೇಡಿನ ರೀತಿಯನ್ನು ಖಂಡಿಸಿ ಜನರು ಬೀದಿಗಿಳಿಯುವ ದಿನ ದೂರವಿಲ್ಲ ಎಂದು ಎಚ್ಚರಿಸಿದರು.

ನಾಲ್ಕು ಸಾರಿಗೆ ನಿಗಮಗಳ ನೌಕರರು ಮೂಲ ವೇತನದಲ್ಲಿ ಶೇ 25 ರಷ್ಟು ಹೆಚ್ಚಳ ಹಾಗೂ ಬಾಕಿ ಪಾವತಿಗೆ ಆಗ್ರಹಿಸಿ ಡಿಸೆಂಬರ್ 31ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ನಿಷ್ಕ್ರಿಯವಾಗಿದೆ ಎಂದು ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆರೋಪಿಸಿದೆ.