ಶಹೀನ್ ಬಾಗ್ ಪ್ರತಿಭಟನೆ ಲೋಕಸಭೆಯಲ್ಲಿ ಪ್ರತಿಧ್ವನಿ

ನವದೆಹಲಿ, ಫೆ 5 :      ರಾಷ್ಟ್ರ ರಾಜಧಾನಿ ಶಹೀನ್ ಬಾಗ್ ನಲ್ಲಿ ನಡೆದ ಪ್ರತಿಭಟನೆ ಬುಧವಾರ ಲೋಕಸಭೆಯಲ್ಲಿ ಪ್ರತಿಧ್ವನಿಸಿದ್ದು, ಶೂನ್ಯ ವೇಳೆಯಲ್ಲಿ ಈ ವಿಷಯವಾಗಿ ಆಡಳಿತ ಪಕ್ಷದ ಸದಸ್ಯರು ಮತ್ತು ಪ್ರತಿಪಕ್ಷಗಳ ಸದಸ್ಯರು ಮಾತಿನ ಚಕಮಕಿ ನಡೆಸಿದರು.  

ಕಳೆದ ವಾರ ಶಾಹೀನ್ ಬಾಗ್ ನಲ್ಲಿ ಗುಂಡು ಹಾರಿಸಿದ ವ್ಯಕ್ತಿಯು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸದಸ್ಯನಾಗಿದ್ದಾನೆ ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಆರೋಪಿಸಿದರು.  

ಆಮ್ ಆದ್ಮಿ ಪಕ್ಷ (ಎಎಪಿ) ನಾಯಕರೊಂದಿಗೆ ಗುಂಡುಹಾರಿಸಿದವನ ಚಿತ್ರಗಳು ಕಂಡುಬಂದಿವೆ. ಪ್ರತಿಭಟನೆಯನ್ನು ಆಮ್ ಆದ್ಮಿ ಪಕ್ಷ ಪ್ರಾಯೋಜಿಸಿತ್ತು. ಸರ್ಕಾರಕ್ಕೆ ಕೆಟ್ಟ ಹೆಸರು ಬರಲು ಕೆಲವರು ರಾಜಕೀಯ ಲಾಭಕ್ಕೆ ಪ್ರತಿಭಟನೆ ಮಾಡಿಸುತ್ತಿದ್ದಾರೆ ಎಂದು ಲೇಖಿ ದೂರಿದರು.  

ಶಾಹೀನ್ ಬಾಗ್ ನಲ್ಲಿ ನಡೆದ ಪ್ರತಿಭಟನೆ ಸೇರಿದಂತೆ ದೆಹಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳನ್ನು ಎಎಪಿ  ಪ್ರಾಯೋಜಿಸುತ್ತಿದೆ ಎಂದು  ಸಮರ್ಥಿಸಿಕೊಂಡ ಲೇಖಿ ಅವರು, ಪ್ರತಿಭಟನಾ ವೇಳೆ ಆದ ನಷ್ಟವನ್ನು ಎಎಪಿ ಅಭ್ಯರ್ಥಿಗಳ ವೆಚ್ಚದಲ್ಲಿ ಸೇರಿಸಬೇಕು ಎಂದು ಚುನಾವಣಾ ಆಯೋಗವನ್ನು ಅವರು ಒತ್ತಾಯಿಸಿದರು.  

ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಿಂಸಾಚಾರಗಳಿಗೆ ಬಲಿಪಶುಗಳಾಗುತ್ತಿದ್ದಾರೆ ಎಂದು ಬಿಎಸ್ ಪಿ ಸದಸ್ಯ ಕುನ್ವರ್ ಡ್ಯಾನಿಶ್ ಅಲಿ ಹೇಳಿದರು.  

ಸರ್ಕಾರದ ಅನುದಾನಿತ ಜೆಎನ್‌ಯು ವಿದ್ಯಾರ್ಥಿಗಳು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ . ವಿಶ್ವ ವಿದ್ಯಾಲಯವನ್ನು ಸಮಯದವರೆಗೆ ಮುಚ್ಚಬೇಕು ಮತ್ತು ತನಿಖೆ ನಡೆಸಬೇಕು ಎಂದು ಬಿಜೆಪಿಯ ವೀರೇಂದ್ರ ಸಿಂಗ್ ಒತ್ತಾಯಿಸಿದರು.  

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ನೀರ್ಗಲ್ಲಿನಲ್ಲಿ ನಿಯೋಜಿಸಲಾಗಿರುವ ಸೈನಿಕರು  ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಲು ಸುಸಜ್ಜಿತರಾಗಿಲ್ಲ ಎಂದು ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಹೇಳಿದ್ದಾರೆ. 

ಸಿಎಜಿ ವರದಿಯನ್ನು ಉಲ್ಲೇಖಿಸಿದ ಅವರು,ಸೈನಿಕರಿಗೆ ಬೂಟುಗಳು, ಮುಖಗವಸುಗಳು ಸೇರಿದಂತೆ ಸಲಕರಣೆಗಳ ಕೊರತೆಯಿದೆ. ತೀವ್ರ ಚಳಿಯಿಂದ ಅನೇಕ ರೀತಿಯ ದೈಹಿಕ ಅಪಾಯಗಳು ಎದುರಾಗುತ್ತವೆ ಎಂದು  ಹೇಳಿದರು.  

ಜೆಎಂಎಂ-ಕಾಂಗ್ರೆಸ್ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ಜಾರ್ಖಂಡ್ ನಲ್ಲಿ ನಕ್ಸಲ್ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದು ಬಿಜೆಪಿಯ ನಿಶಿಕಾಂತ್ ದುಬೆ ಹೇಳಿದರು.