ಮಂಗಳೂರು ಗಲಭೆಯ ಹಿಂದಿರುವುದು ಷಡ್ಯಂತ್ರ ಮತ್ತು ಪಿತೂರಿ: ಯಡಿಯೂರಪ್ಪ

ಮಂಗಳೂರು, ಡಿ‌. 25 ಮಂಗಳೂರಿನಲ್ಲಿ ನಡೆದ ಗಲಭೆಯ ಹಿಂದೆ ಇರುವುದು ವ್ಯವಸ್ಥಿತ ಷಡ್ಯಂತ್ರ ಮತ್ತು ಪಿತೂರಿ  ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆಯಲ್ಲಿ ಭಾಗಿಯಾದವರ ವಿರುದ್ದ ಕಠಿಣ ಕ್ರಮ‌ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ  ಸೂಚಿಸಲಾಗಿದೆ. ಕಲ್ಲು ತೂರಾಟ ಮಾಡಿ ಸಾರ್ವಜನಿಕ ಆಸ್ತಿ ‌ನಾಶಪಡಿಸಿದವರನ್ನು ಕೂಡಲೇ ಬಂಧಿಸಲಾಗುವುದು. ಮಂಗಳೂರು ಗಲಭೆ ವಿಚಾರದಲ್ಲಿ ವಿಪಕ್ಷ ನಾಯಕರು ಅನಗತ್ಯ ಗೊಂದಲ  ಸೃಷ್ಟಿಸುವುದನ್ನು ನಿಲ್ಲಿಸಬೇಕು. ಕರಾವಳಿಯಲ್ಲಿ ಶಾಂತಿ‌ಕದಡುವ ಪ್ರಯತ್ನ ಮಾಡಿದವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.ಕೇರಳದಿಂದ ಮಂಗಳೂರಿಗೆ ಆಗಮಿಸಿ ಕಳೆದ ರಾತ್ರಿ ಇಲ್ಲಿನ ಸರ್ಕ್ಯೂಟ್ ಹೌಸ್‌ನಲ್ಲಿ ತಂಗಿದ್ದು, ಸರ್ಕ್ಯೂಟ್ ಹೌಸ್ ಸುತ್ತಮುತ್ತ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿತ್ತು.ಇಂದು ಬೆಳಗ್ಗೆ ಮುಖ್ಯಮಂತ್ರಿ ಮಂಗಳೂರು ಗಲಭೆ ಸಂಬಂಧ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಿದರು.ಬಳಿಕ ಅವರು ಉಡುಪಿಗೆ ತೆರಳಿ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ಆರೋಗ್ಯ ವಿಚಾರಿಸಲಿದ್ದಾರೆ.