ಶಂಕಿತ ಉಗ್ರ ಮೆಹಬೂಬ್ ಪಾಷನ ತೀವ್ರ ವಿಚಾರಣೆ

ಬೆಂಗಳೂರು, ಜ.19 :    ಬಂಧಿತ ಶಂಕಿತ ಉಗ್ರ ಮೆಹಬೂಬ್ ಪಾಷಾ ನಗರದ ಜನ ನಿಬಿಡ ಪ್ರದೇಶವೊಂದರಲ್ಲಿ  ಬಾಂಬ್ ಸ್ಫೋಟ ನಡೆಸುವುದು, ಪ್ರಮುಖ ಹಿಂದೂ ಮುಖಂಡರ ಹತ್ಯೆ ನಡೆಸುವುದು ಸೇರಿದಂತೆ ಕೆಲವು ದುಷ್ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿರುವುದನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರ ವಿಚಾರಣೆಯ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ರಹಸ್ಯ ಸ್ಥಳವೊಂದರಲ್ಲಿ ಸಿಸಿಬಿ ಪೊಲೀಸರು ನಡೆಸುತ್ತಿರುವ  ವಿಚಾರಣೆಯಲ್ಲಿ ಬಂಧಿತ ಉಗ್ರ ಮೆಹಬೂಬ್ ಪಾಷಾ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಪ್ರಮುಖ ಹಿಂದೂ ಮುಖಂಡರ ಹತ್ಯೆ ನಡೆಸಿ ಕೋಮು ಗಲಭೆಗೆ ಸಂಚು ರೂಪಿಸಿರುವ ಮಾಹಿತಿ  ನೀಡಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. 

ದಕ್ಷಿಣ ಭಾರತದ ಐಸಿಸ್ ಕಮಾಂಡರ್  ಮೆಹಬೂಬ್ ಪಾಷಾ  10 ಮೊಬೈಲ್ ಸಿಮ್ ಖರೀದಿಸಿರುವುದನ್ನು ಆಧರಿಸಿಯೇ ಪೊಲೀಸರು ಬಂಧಿಸಿದ್ದಾರೆ. ಕಳೆದ 2019 ರ ಏಪ್ರಿಲಿನಲ್ಲಿ ತಮಿಳುನಾಡಿನ ಹಿಂದೂ ಮುಖಂಡ  ಸುರೇಶ್ ಹತ್ಯೆ ಪ್ರಕರಣದ ಆರೋಪಿ, ಜಿಹಾದಿ ಶಂಕಿತ ಉಗ್ರ ಮೊಹಿನುದ್ದೀನ್ ಖಾಜಾ ಜಾಮೀನು  ಪಡೆದು ಬಂದು ತಲೆ ಮರೆಸಿಕೊಂಡಿದ್ದ. ಖಾಜಾ ಪತ್ತೆಗೆ ತಮಿಳುನಾಡು ನ್ಯಾಯಾಲಯ ಸೂಚಿಸಿದ  ನಂತರ ಕೇಂದ್ರ ತನಿಖಾ ಸಂಸ್ಥೆಗಳು ಎಚ್ಚೆತ್ತುಕೊಂಡಿದ್ದವು. 

ಸೇಲಂ ನಲ್ಲಿ ಖಾಜಾ  ಶಿಷ್ಯನೊಬ್ಬ ನಕಲಿ ದಾಖಲೆ ನೀಡಿ 10 ಸಿಮ್ ಖರೀದಿಸಿದ್ದ. ಈ ಸಿಮ್ಗಳು ಕೋಲಾರ, ಬರ್ದಾನ್  ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದುದನ್ನು ಪತ್ತೆ ಮಾಡಲಾಗಿತ್ತು.  ಕೂಡಲೇ ಐಎಸ್ಡಿ ಮತ್ತು ಸಿಸಿಬಿ ಪೊಲೀಸರು ಸದ್ದುಗುಂಟೆಪಾಳ್ಯದ ಮನೆಯೊಂದರಲ್ಲಿ  ಮೆಹಬೂಬ್ ಪಾಷಾನ ಸಹಚರರನ್ನು ಬಂಧಿಸಿದ್ದರು. ಹಿಂದೂ ಮುಖಂಡ ಸುರೇಶ್ ಹತ್ಯೆ ಬಳಿಕ  ಮೊಹಿನುದ್ದೀನ್ ಖಾಜಾ ಇಸ್ಲಾಮಿಕ್ ಸ್ಟೇಟ್ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದನು ಎಂಬ  ಮಾಹಿತಿ ಲಭ್ಯವಾಗಿದೆ.