ರಾಯಚೂರು, ನ 27- ಶಿಕ್ಷಣ ವ್ಯವಸ್ಥೆ ಕೇಂದ್ರೀಕರಿಸುವ ಮೂಲಕ ಕೇಸರೀಕರಣಗೊಳಿಸುವ ಹುನ್ನಾರ ನಡೆದಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಶಂಕೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಭಾಷೆ, ಭಾವನೆ, ಪ್ರಾದೇಶಿಕತೆ ಅನುಸಾರ ಶಿಕ್ಷಣ ಪದ್ಧತಿ ಇದ್ದರೆ ವಿದ್ಯಾರ್ಥಿಗಳಿಗೆ ಅನುಕೂಲ. ಆದರೆ, ಕೇಂದ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲು ಮುಂದಾಗಿರುವುದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತಂದು ವಿಕೇಂದ್ರೀಕರಣ ಮಾಡುವ ಬದಲು ರಾಷ್ಟ್ರೀಯ ಶಿಕ್ಷಣ ಆಯೋಗ ರಚಿಸಿ ಅದಕ್ಕೆ ಪ್ರಧಾನಮಂತ್ರಿಯನ್ನು ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಕೇಂದ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲು ಈಗಾಗಲೇ ಕರಡು ಸಿದ್ಧಗೊಂಡಿದ್ದು ಇದನ್ನು ದೇಶದ ಪ್ರಜ್ಞಾವಂತರು ವಿರೋಧಿಸುವ ಅಗತ್ಯತೆಯನ್ನು ಅವರು ಪ್ರತಿಪಾದಿಸಿದರು.
ದೇಶದಲ್ಲಿ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿಯುತ್ತಿದ್ದು ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದೆ. ಕೈಗಾರಿಕಾ ಬೆಳವಣಿಗೆ ಕುಂಠಿತವಾಗಿದೆ. ಅದರ ಉತ್ತೇಜನಕ್ಕೆ ಹಲವು ಮಾರ್ಗಗಳು ಇದ್ದರೂ ಕಾರ್ಪೋರೇಟ್ ವಲಯಗಳ ಅನುಕೂಲವಾದ ಆರ್ಥಿಕ ನೀತಿಗೆ ಆದ್ಯತೆ ನೀಡಿರುವುದರಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗಿದೆ ಎಂದು ಸಮಸ್ಯೆ ಬಿಡಿಸಿ ಹೇಳಿದರು.
ಸ್ವಾಯತ್ತ ಸಂಸ್ಥೆಗಳಾದ ಆರ್‌ಬಿಐ, ಚುನಾವಣಾ ಆಯೋಗ, ಸಿಬಿಐನಂತಹ ಸಂಸ್ಥೆಗಳ ಸಾಂವಿಧಾನಿಕ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎಂದು ಆರೋಪಿಸಿದ ಅವರು, ಸಂವಿಧಾನಕ್ಕೆ ವಿರುದ್ಧವಾದ ಚಟುವಟಿಕೆಗಳು ನಡೆಯುತ್ತಿದ್ದರೂ ಅದನ್ನು ಪ್ರಶ್ನಿಸಲಾರದಂತಹ ವಾತಾವರಣ ನಿರ್ಮಾಣವಾಗಿರುವುದು ಅಪಾಯದ ಮುನ್ಸೂಚನೆ ಎಂದರು.
ತಮ್ಮ ರಾಜೀನಾಮೆಗೆ ಯಾವುದೇ ರಾಜಕೀಯ ಪಕ್ಷಗಳ ಅಥವಾ ಸರ್ಕಾರದ ಒತ್ತಡವಾಗಲಿ ಇರಲಿಲ್ಲ. ಸರಕಾರಿ ವ್ಯವಸ್ಥೆಯಲ್ಲಿ ಇದ್ದು ಕೆಲವು ಸಂಗತಿಗಳನ್ನು ಪ್ರಶ್ನಿಸಲು ಸಾಧ್ಯವಿಲ್ಲವಾದ್ದರಿಂದ ರಾಜಿನಾಮೆ ನೀಡಿ ಹೊರಬಂದಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಜನರನ್ನು ಮೋಡಿ ಮಾತುಗಳಲ್ಲಿ ಮರಳು ಮಾಡುವ ಪ್ರಯತ್ನ ನಡೆದಿದ್ದು ಪ್ರಜ್ಞಾವಂತ ಸಮಾಜ ಪ್ರಶ್ನಿಸದೇ ಇದ್ದರೆ ಇಡೀ ದೇಶ ಗಂಡಾಂತರ ಎದುರಿಸಬೇಕಾದ ಕಾಲ ದೂರವಿಲ್ಲ ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ಪರ ಹೋರಾಟಗಾರ ಹಫೀಜುಲ್ಲಾ ಮಾತನಾಡಿ, ಹೊಸ ಶಿಕ್ಷಣ ನೀತಿಯಿಂದ ಖಾಸಗೀಕರಣ ನೀತಿಗೆ ಉತ್ತೇಜನ ದೊರೆಯಲಿದೆ. ಸ್ವಚ್ಛೆಯಿಂದ ಯಾರಾದರೂ ಶಾಲೆಗಳಿಗೆ ತೆರಳಿ ಪಾಠ ಮಾಡಬಹುದಾಗಿದೆ ಎಂದಾದಲ್ಲಿ ಶಾಲೆಗಳಿಗೆ ಶಿಕ್ಷಕರನ್ನೇ ನೇಮಿಸಿಕೊಳ್ಳದಂತಹ ಸ್ಥಿತಿ ನಿರ್ಮಾಣವಾದರೂ ಆಶ್ಚರ್ಯಪಡಬೇಕಾಗಿಲ್ಲ ಎಂದರು. ಗುಣಮಟ್ಟದ ಶಿಕ್ಷಣ ನೀಡದೇ ಬೋರ್ಡ್ ಪರೀಕ್ಷೆಗಳನ್ನು ಆಯೋಜನೆ ಮಾಡಿದರೆ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ. ಹೀಗಾಗಿ ಅಗತ್ಯವಿರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿ ಪೂರ್ಣಪ್ರಮಾಣದ ತರಬೇತಿ ನೀಡಲು ಆದ್ಯತೆ ನೀಡಬೇಕು ಎಂದ ಅವರು, ಹೊಸದಾಗಿ ಜಾರಿಗೆ ತರಲು ಮುಂದಾಗಿರುವ ಕೇಂದ್ರದ ಕ್ರಮದ ವಿರುದ್ಧ ಪರ್ಯಾಯ ಶಿಕ್ಷಣ ಕರಡು ನೀತಿ ಸಲ್ಲಿಸುವುದಾಗಿ ಹೇಳಿದರು.