ತಿರುಮಲ, ಜುಲೈ 18 (ಯುಎನ್ಐ) ಆಂಧ್ರಪ್ರದೇಶದ ತಿರುಪತಿ ತಿರುಮಲ ದೇಗುಲದಲ್ಲಿ ಜುಲೈ 23ರಂದು ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಹಾಗೂ ಜುಲೈ 24ರಂದು 5 ವರ್ಷದ ಕೆಳಗಿನ ಮಕ್ಕಳೊಂದಿಗಿನ ಪೋಷಕರಿಗೆ ವಿಶೇಷ ದರ್ಶನದ ಅವಕಾಶ ಕಲ್ಪಿಸಲಾಗಿದೆ.
ಈ ವಿಶೇಷ ದರ್ಶನದ ಅವಕಾಶ ಹಿಂದಿನಿಂದಲೂ ಜಾರಿಯಲ್ಲಿತ್ತಾದರೂ, ಏಪ್ರಿಲ್ ನಲ್ಲಿ ಯಾತ್ರಿಕರ ಸಂಖ್ಯೆ ಹೆಚ್ಚಾಗಿದ್ದರಿಂದ ಜೂನ್ ವರೆಗೆ ಅದನ್ನು ರದ್ದುಗೊಳಿಸಲಾಗಿತ್ತು.
ಜುಲೈ 23ರಂದು 65 ವರ್ಷ ಹಾಗೂ ಅದಕ್ಕೂ ಮೀರಿದ ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ಮೂರು ಹಂತಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮುಂಜಾನೆ 10ರ ವೇಳೆಗೆ 1 ಸಾವಿರ, ಮಧ್ಯಾಹ್ನ 2ಕ್ಕೆ 2 ಸಾವಿರ ಹಾಗೂ 3ಕ್ಕೆ 1 ಸಾವಿರ ಟೋಕನ್ ಗಳನ್ನು ವಿತರಿಸಲಾಗುವುದು.
ಜುಲೈ 24ರಂದು, ಮುಂಜಾನೆ 9ರಿಂದ 1.30ರವರೆಗೆ ಐದು ವರ್ಷಗಳಿಗಿಂತ ಕೆಳಗಿನ ವಯಸ್ಸಿನ ಮಕ್ಕಳನ್ನೊಳಗೊಂಡ ಪೋಷಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಟಿಟಿಡಿ ತಿಳಿಸಿದೆ.