ಬೆಂಗಳೂರು 15: ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಮತ್ತು ಪ್ರಶಾಂತ್ ರಂಕಾ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಈ ಸಂಬಂಧ ರಾಗಿಣಿ ಮತ್ತು ಪ್ರಶಾಂತ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅರ್ಜಿದಾರರ ವಿರುದ್ಧದ ಆರೋಪ ಪುಷ್ಟೀಕರಿಸಲು ಪ್ರಾಸಿಕ್ಯೂಷನ್ ಸಹ ಆರೋಪಿಗಳ ಹೇಳಿಕೆ ಮತ್ತು ದೋಷಾರೋಪ ಪಟ್ಟಿಯಲ್ಲಿರುವ ಸಾಕ್ಷಿಗಳನ್ನು ಹೊರತುಪಡಿಸಿ ಬೇರಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಹೇಳಿದೆ.
ರಾಗಿಣಿ ಮತ್ತು ಇತರರು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಮೋಜು ಮೇಜವಾನಿಗಳನ್ನು ಆಯೋಜಿಸಿ, ಗ್ರಾಹಕರನ್ನು ಕರೆಸಿ ಡ್ರಗ್ ಪೆಡ್ಲರ್‌ಗಳ ಮೂಲಕ ಕೂಟಕ್ಕೆ ಬರುವ ಉದ್ಯಮಿಗಳು, ಸೆಲೆಬ್ರಿಟಿಗಳು, ನಟ-ನಟಿಯರು, ಡಿ.ಜೆಗಳು (ಡಿಸ್ಕೊ ಜಾಕಿ) ಸಾಫ್ಟ್‌ವೇರ್ ಉದ್ಯೋಗಿಗಳು ಇತರರಿಗೆ ಮಾದಕ ವಸ್ತುಗಳನ್ನು ಪೂರೈಸಿ, ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ ಎಂಬ ಆರೋಪದಡಿ ಸಿಸಿಬಿಯ ಎಸಿಪಿ ಕೆ.ಸಿ.ಗೌತಮ್ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ 2020ರ ಸೆಪ್ಟೆಂಬರ್ 4ರಂದು ದೂರು ದಾಖಲಿಸಿದ್ದರು.