ಜ್ಯುವಲರಿ ಶಾಪ್ಗಳ ಭದ್ರತೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಜಾಗೃತಿ ಅಭಿಯಾನ

ಜ್ಯುವಲರಿ ಶಾಪ್ಗಳ ಭದ್ರತೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಜಾಗೃತಿ ಅಭಿಯಾನ Security of jewellery shops: Police awareness campaign in Uttara Kannada district

                   ಕಾರವಾರ 30 :  ರಾಜ್ಯದ ವಿವಿಧೆಡೆ ಜ್ಯುವಲರಿ ಶಾಪ್ಗಳು ಹಾಗೂ ಮನೆಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭದ್ರತಾ ಕ್ರಮಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಇತ್ತೀಚಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಜ್ಯುವಲರಿ ಕಳ್ಳತನ ಪ್ರಕರಣಗಳು ವರದಿಯಾಗದಿದ್ದರೂ, ಚಿಕ್ಕಪುಟ್ಟ ಕಳ್ಳತನಗಳು ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್‌.  ದೀಪನ್ ನಿರ್ದೇಶನದಂತೆ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಜ್ಯುವಲರಿ ಶಾಪ್ಗಳಿಗೆ ಖುದ್ದಾಗಿ   ಭೇಟಿ ನೀಡಿ,  ಭದ್ರತಾ ಜಾಗೃತಿ ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ.

                     ಈ ವೇಳೆ ಶಾಪ್ಗಳ ಒಳ ಮತ್ತು ಹೊರಭಾಗದ ಭದ್ರತಾ ವ್ಯವಸ್ಥೆಗಳನ್ನು ಸೂಕ್ಷ್ಮವಾಗಿ ಪರೀಶೀಲಿಸಿ, ಅಂಗಡಿಗಳಲ್ಲಿ ಭದ್ರತೆಯಲ್ಲಿ  ದುರ್ಬಲತೆಗಳಿದ್ದರೆ ,  ತಕ್ಷಣ ಸರಿಪಡಿಸಿಕೊಳ್ಳುವಂತೆ ಮಾಲೀಕರಿಗೆ ಪೋಲೀಸರು  ಸಲಹೆ ನೀಡುತ್ತಿದ್ದಾರೆ. ಜ್ಯುವೇಲರಿ ಮಾಲೀಕರಿಗೆ ನೀಡಿದ ಭದ್ರತಾ ಸಲಹೆಗಳು: ಪೊಲೀಸ್ ಅಧಿಕಾರಿಗಳು ಜ್ಯುವೇಲರಿ ಶಾಪ್ ಮಾಲೀಕರಿಗೆ ಈ ಕೆಳಗಿನ ಮುಖ್ಯ ಭದ್ರತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಸೂಚನೆ ನೀಡಿದ್ದಾರೆ: ಉನ್ನತ ಗುಣಮಟ್ಟದ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆ ಮಾಡಬೇಕು. ದಿನದ   24 ತಾಸು ರೆಕಾರ್ಡಿಂಗ್ ವ್ಯವಸ್ಥೆ ಇರಬೇಕು . ಶಾಪ್ ಒಳಭಾಗ ಮತ್ತು ಪ್ರವೇಶ ದ್ವಾರದಲ್ಲಿ ಬರ್ಗ್ಲರ್ ಅಲಾರಂ ವ್ಯವಸ್ಥೆ ಮಾಡಿಕೊಳ್ಳಿ.  ರಾತ್ರಿ ಸಮಯದಲ್ಲಿ ಚಲನವಲನ ಪತ್ತೆ ಹಚ್ಚುವ ಮೋಷನ್ ಸೆನ್ಸರ್ ಲೈಟ್ಗಳ ಅಳವಡಿಕೆ ಹಾಗೂ  ಅಮೂಲ್ಯ ಚಿನ್ನಾಭರಣಗಳಿಗಾಗಿ ಸುರಕ್ಷಿತ ಲಾಕರ್ ವ್ಯವಸ್ಥೆ ಮಾಡಿಕೊಳ್ಳಬೇಕು.

                   ವಿದ್ಯುತ್ ವ್ಯತ್ಯಯವಾದರೂ ಕಾರ್ಯನಿರ್ವಹಿಸುವ ಬ್ಯಾಕಪ್ ಪವರ್ ವ್ಯವಸ್ಥೆ. ಸಿಬ್ಬಂದಿ ನೇಮಕದಲ್ಲಿ ಜಾಗೃತಿ ಮತ್ತು ಶಾಪ್  ವೇಳೆಯಲ್ಲಿ ಹೆಚ್ಚುವರಿ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಮುನ್ನೆಚ್ಚರಿಕೆ  ನಿಗಾ: ಪೊಲೀಸ್ ಇಲಾಖೆ ಕಳ್ಳತನ ಪ್ರಕರಣಗಳ ತನಿಖೆ  ಮಾಡುತ್ತಿದೆ. ಮತ್ತು ಆರೋಪಿಗಳ ಪತ್ತೆಗೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಜೊತೆಗೆ, ಮುನ್ನೆಚ್ಚರಿಕೆಯೇ ಉತ್ತಮ ರಕ್ಷಣೆ ಎಂಬ ನಿಟ್ಟಿನಲ್ಲಿ ಜ್ಯುವೇಲರಿ ಶಾಪ್ ಮಾಲೀಕರಿಗೆ ಭದ್ರತಾ ಜಾಗೃತಿ ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಎಸ್ಪಿ ದೀಪನ್  ತಿಳಿಸಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಜ್ಯುವೇಲರಿ ಶಾಪ್ ಮಾಲೀಕರು ಹಾಗೂ ವ್ಯಾಪಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ಮುನ್ನೆಚ್ಚರಿಕಾ ಕಾರ್ಯಕ್ರಮಗಳು ಕಳ್ಳತನ ತಡೆಗಟ್ಟುವಲ್ಲಿ ಸಹಕಾರಿಯಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲೂ ಜಿಲ್ಲೆಯಾದ್ಯಂತ ಇಂತಹ ಭದ್ರತಾ ಪರೀಶೀಲನೆ ಮತ್ತು ಜಾಗೃತಿ ಅಭಿಯಾನಗಳನ್ನು ಮುಂದುವರಿಸುವುದಾಗಿ ಪೊಲೀಸ್ ಇಲಾಖೆ ಹೇಳಿದೆ.