ಸಮಾಜ ನಿರ್ಮಾಣಕ್ಕೆ ಜಾತ್ಯಾತೀತ ಭಾವನೆ ಮುಖ್ಯ: ಬಸವಶಾಂತಲಿಂಗ ಶ್ರೀ

ಹಾವೇರಿ 17 : ಸಮ ಸಮಾಜ  ನಿರ್ಮಾಣಕ್ಕೆ  ಜಾತ್ಯಾತೀತ ಭಾವನೆ ಮುಖ್ಯವಾಗಿದ್ದು, ಶರಣರ ಹಾಗೂ ಹೋರಾಟಗಾರರ ಕ್ರಾಂತಿಯಿಂದ ಸಮಾಜದಲ್ಲಿ ಬದಲಾವಣೆ ಕಾಣಬಹುದಾಗಿದೆ ಎಂದು  ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮಿಜಿಗಳು  ಹೇಳಿದರು.

        ನಗರದ ಮುರುಘರಾಜೇಂದ್ರ ಮಠದಲ್ಲಿ ಸಮತಾ ಸೈನಿಕದಳ ಹಾಗೂ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಜಿಲ್ಲಾ ಸಮಿತಿ ವತಿಯಿಂದ 01-01-1818 ರ ಭೀಮಾ ಕೊರೆಗಾಂವ ವಿಜಯೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದ ಸಾನಿಧ್ಯವಹಿಸಿ ಹಾಗೂ ಉದ್ಘಾಟಿಸಿ ಅವರು ಮಾತನಾಡಿದರು.

      ಸ್ವಾತಂತ್ರ್ಯ ಪೂರ್ವದಲ್ಲಿ ಭೀಮಾ ಕೊರೆಗಾಂವದಲ್ಲಿ ನಡೆದ ಘಟನೆ ಶೋಷಣೆಯ ವಿರುದ್ಧದ ಕ್ರಾಂತಿಯಾಗಿದ್ದು, ಮನುಷ್ಯತ್ವದ ನೆಲೆಗೆ ಕಾರಣವಾಗಿದೆ.ಶರಣರು ಸಮಾಜದಲ್ಲಿ ಜನರು ಉತ್ತಮ ಮೌಲ್ಯಯುತ ಬದುಕು ಕಟ್ಟಿಕೊಳ್ಳುವಂತಾಗಲಿ ಎಂದು ಸಮಾಜದ ಕ್ರಾಂತಿಗೆ ಮುಂದಾದರು. ಅದರಂತೆ ಶೋಷಣೆಯಿಂದ ಮುಕ್ತಿ ಪಡೆಯುವ ಮಾರ್ಗವು ಭೀಮಾ ಕೊರೆಗಾಂವ ವಿಜಯೋತ್ಸವದಲ್ಲಿ ಅಡಿಗಿದೆ.ಸಮಬಾಳು, ಸಮಪಾಲು, ಸಮ ಸಮಾಜಕ್ಕಾಗಿ ಭಾವನಾತ್ಮಕವಾಗಿ ಒಂದಾಗಿ ಬಾಳಬೇಕಾಗಿದೆ ಎಂದು ಶ್ರೀ ಬಸವಶಾಂತಲಿಂಗ ಸ್ವಾಮಿಜಿಗಳು ಆಶಿರ್ವಚನದಲ್ಲಿ ತಿಳಿಸಿದರು.

       ಕೆಸಿಡಿ ಕಾಲೇಜಿನ ಪ್ರೊ.ಸುರೇಶ ಹುಲ್ಲಣ್ಣನವರ ಉಪನ್ಯಾಸ ನೀಡುತ್ತಾ ಜಾತಿಯ ಮೇಲೆ ವ್ಯಕ್ತಿ ನಿರ್ಧಾರವಾಗಬಾರದು.ದೇಶದ ಇತಿಹಾಸವನ್ನು ಅರಿತಾಗ ಕೋರೆಗಾಂವ ಘಟನೆಯಲ್ಲಿ ಸೈನಿಕರು ಶೋಷಣೆ ಮುಕ್ತವಾಗಲು ತಮ್ಮ ಹೋರಾಟ ಮುಂದುವರಿಸಿದರು. ಕೆಚ್ಚೆದೆಯಿಂದ ಹೋರಾಡಿದ ದಲಿತ ಯೋಧರು ವಿಜಯೋತ್ಸವ ಆಚರಿಸುವಂತಾಯಿತು. ಪ್ರತಿ ವರ್ಷ ಜನೆವರಿ 01 ಕೋರೆಗಾಂವ ವಿಜಯೋತ್ಸವ ಮಾಡಲಾಗುತ್ತದೆ. ಸಂವಿಧಾನ ಎಲ್ಲರಿಗೂ ಸೇರಿದ್ದು, ಇಂದಿನ ದಿನಮಾನದಲ್ಲಿ ಶೋಷಣೆ ಮುಕ್ತ ಸಮಾಜದಲ್ಲಿ ಬಾಳಲು ಇತಿಹಾಸದ ಹೋರಾಟದ ಪುಟಗಳು ನೆನಪಿಗೆ ಬರುತ್ತೇವೆ ಎಂದು ಉಪನ್ಯಾಸ ನೀಡಿದರು.

       ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ  ಮಾತನಾಡಿ ಎಲ್ಲರೂ ಒಂದಾಗಿ ಬಾಳಬೇಕಾದರೆ ಡಾ|| ಬಿ.ಆರ್ ಅಂಬೇಡ್ಕರ್ ಬರೆದಿರುದ ಸಂವಿಧಾನ ಬದುಕಿನ ಗ್ರಂಥವಾಗಬೇಕಾಗಿದೆ ಎಂದರು

      ಅಹಿಂದ ಸಂಘಟನೆಯ ಮುಖಂಡ ಬಸವರಾಜ ಹಾದಿಮನಿ ಮಾತನಾಡಿ  ಎಲ್ಲ ಹಿಂದುಳಿವ ವರ್ಗದವರು ಒಗ್ಗಟಾಗಿ ಹೋರಾಟ ಮಾಡಲು ಶೋಷಣೆಯಿಂದ ಬದುಕಲು ಭೀಮಾ ಕೊರೆಗಾಂವ ಹೋರಾಟ ನಮಗೆ ದಾರಿದ್ವೀಪವಾಗಬೇಕಾಗಿದೆ ಎಂದರು.

  ಜಿಪಂ ಮಾಜಿಅಧ್ಯಕ್ಷ ಪರಮೇಶ್ವರಪ್ಪ ಮೆಗಳಮನಿ ಮಾತನಾಡಿ ನಮ್ಮ ಹಕ್ಕು ಪಡೆಯಲು ಹೋರಾಟ ಮಾಡಬೇಕೆಂದರು.

       ಎಸ್ಎಸ್ಡಿ ಅಧ್ಯಕ್ಷರಾದ ಪಿತಾಂಬ್ರಿಪಾ ಬಿಳಾರ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ಕ್ರಾಂತಿಯಿಂದ ಬದಲಾವನೆ ಸಾಧ್ಯ.ಬಸವಣ್ಣನವರ ಸಮಾಜದ ಕನಸನ್ನು ನೆನಸು ಮಾಡಲು ಜಾಗೃತಿ ತಿಳುವಳಿಕೆ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದರು. 

        ಡಿಎಸ್ಎಸ್ ಮುಖಂಡ ಮಾಲತೇಶ ಯಲ್ಲಾಪೂರ ಮತ್ತು ವೆಂಕಟೇಶ್ ನಾರಾಯಣಿಯವರನ್ನು  ಸನ್ಮಾನಿಸಲಾಯಿತು.ದಲಿತ ಸಂಘಟನೆಯ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಎನ್,ಎನ್ ಗಾಳೆಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಧರ್ಮಣ್ಣ ರೇವಣ್ಣನವರ, ಎಂ.ಪಿ ಕರ್ಜಗಿ,ಇಸ್ಮಾಯಿಲ್ಸಾಬ ಬುಡಂದಿ, ನಿಂಗಪ್ಪ ನಿಂಬಕ್ಕನವರ, ಸತೀಶ ಕಾಟೇನಹಳ್ಳಿ, ಮಹೇಶ್ ಜಿ.ತಿಮ್ಮಪ್ಪ ಹಿರೇಮನಿ, ಸುನೀತಾ ಎಸ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.