ಆಕ್ಲೆಂಡ್, ಜ 25, ಮೊದಲನೇ ಪಂದ್ಯದ ರನ್ ಹೊಳೆಯಲ್ಲಿ ಈಜಿ ದಡ ಸೇರಿದ್ದ ಭಾರತ ತಂಡ ನಾಳೆಯೂ ಇದೇ ಅಂಗಳ ಈಡನ್ ಪಾರ್ಕ್ ನಲ್ಲಿ ನಡೆಯುವ ಎರಡನೇ ಹಣಾಹಣಿಯಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಗೆದ್ದು ಮುನ್ನಡೆಯನ್ನು ಇಗ್ಗಿಸುವ ಯೋಜನೆಯಲ್ಲಿದೆ. ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಕಳೆದ ಎಂಟು ಟಿ20 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಪಡೆದಿದೆ. ಪ್ರಸ್ತುತ ಸರಣಿಯಲ್ಲಿ ನಾಲ್ಕು ಪಂದ್ಯಗಳು ಬಾಕಿ ಇವೆ. ಆಕ್ಲೆಂಡ್ ನಲ್ಲಿ ಮತ್ತೊಂದು ಗೆಲುವು ಸಾಧಿಸಿದ್ದೇ ಆದಲ್ಲಿ ಟೀಮ್ ಇಂಡಿಯಾ ಚುಟುಕು ಸರಣಿ ಗೆಲ್ಲುವುದರಲ್ಲಿ ಸ್ಪಷ್ಟತೆ ಕಾಣಲಿದೆ. ಆದರೆ, ಕಳೆದ ಎರಡು ಬಾರಿ ಪ್ರಯತ್ನದಲ್ಲಿ ಭಾರತ ಎಡವಿತ್ತು.
ನ್ಯೂಜಿಲೆಂಡ್ ನೀಡಿದ್ದ 204 ರನ್ ಬೃಹತ್ ಗುರಿ ಮುಟ್ಟುವಲ್ಲಿ ಭಾರತದ ಬ್ಯಾಟಿಂಗ್ ಅದ್ಭುತವಾಗಿತ್ತು. ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ರನ್ ಹೊಳೆ ಹರಿಸಿದ್ದರು. ಮೂಲೆ-ಮೂಲೆಗೆ ಚೆಂಡನ್ನು ಅಟ್ಟುವ ಮೂಲಕ ದ್ವೀಪ ರಾಷ್ಟ್ರದ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿತ್ತು. ಆ ಮೂಲಕ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಕೊಹ್ಲಿ ಪಡೆ ಗೆದ್ದು ಬೀಗಿತ್ತು. ಕೊನೆಯವರೆಗೂ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಶ್ರೇಯಸ್ ಅಯ್ಯರ್ ಭಾರತವನ್ನು ಗೆಲುವಿನ ದಡ ಸೇರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಶುಕ್ರವಾರ ಎರಡೂ ತಂಡಗಳಿಂದ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮೂಡಿಬಂದಿತ್ತು. ಪಂದ್ಯದಲ್ಲಿ ಒಟ್ಟು ಐದು ಅರ್ಧಶತಕಗಳು ಮೂಡಿಬಂದಿದ್ದವು. ಟಿ-20 ಪಂದ್ಯವೊಂದರಲ್ಲಿ ಐದು ಅರ್ಧಶತಕ ಗಳಿಸಿದ ಮೊದಲನೇ ಪಂದ್ಯ ಕೂಡ ಅದಾಗಿತ್ತು. ಈಡನ್ ಪಾರ್ಕ್ ಅಂಗಳದಲ್ಲಿ ಬೌಂಡರಿ ಚಿಕ್ಕದಾಗಿದ್ದರಿಂದ ರನ್ ನಿಯಂತ್ರಿಸುವಲ್ಲಿ ಬೌಲರ್ ಗಳಿಗೆ ಕಠಿಣವಾಗಿತ್ತು.
ಭಾರತ ತಂಡದ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದ ವೇಲೆ ಪಾದ ಉರುಳಿತ್ತು. ತಕ್ಷಣ ಅವರಿಗೆ ಅಂಗಳದಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಆದಾಗ್ಯೂ, ಅವರು ಇನ್ನುಳಿದ ಪಂದ್ಯಗಳಲ್ಲಿ ಬೌಲಿಂಗ್ ಮಾಡಲು ಶಕ್ತರಿದ್ದಾರೆ. ಮೊದಲನೇ ಪಂದ್ಯವಾಡಿದ್ದ ಅಂತಿಮ 11 ಆಟಗಾರರನ್ನೇ ನಾಳಿನ ಪಂದ್ಯಕ್ಕೂ ನಾಯಕ ಕೊಹ್ಲಿ ಉಳಿಸಿಕೊಳ್ಳುವ ಸಾಧ್ಯತೆ ಇದೆ.
ಆತಿಥೇಯ ನ್ಯೂಜಿಲೆಂಡ್ ನಾಳಿನ ಪಂದ್ಯಕ್ಕೆ ಅಂತಿಮ 11ರಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ವಿಶೇಷವಾಗಿ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಬಹುದು. ಬ್ಯಾಟಿಂಗ್ ವಿಭಾಗದಲ್ಲಿ ಕಾಲಿನ್ ಮನ್ರೊ, ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಅವರ ಬ್ಯಾಟ್ ಗಳಿಂದ ರನ್ ಹೊಳೆ ಹರಿಯುತ್ತಿರುವುದು ಆತಿಥೇಯರಿಗೆ ಪ್ಲಸ್ ಪಾಯಿಂಟ್. ಆದರೆ, ನಿರ್ಣಾಯಕ ಹಂತದಲ್ಲಿ ವಿಕೆಟ್ ಪಡೆಯುವಲ್ಲಿ ಬೌಲರ್ ಗಳು ವಿಫಲರಾಗಿದ್ದಾರೆ. ಈ ಬಗ್ಗೆ ನಾಯಕ ವಿಲಿಯಮ್ಸನ್ ನಾಳಿನ ಪಂದ್ಯದಲ್ಲಿ ಗಮನಹರಿಸಬಹುದು.
ಗಾಯಕ್ಕೆ ತುತ್ತಾಗಿರುವ ಹಿರಿಯ ವೇಗಿಗಳಾದ ಟ್ರೆಂಟ್ ಬೌಲ್ಟ್ ಹಾಗೂ ಲಾಕಿ ಫರ್ಗೂಸನ್ ಅವರ ಅನುಪಸ್ಥಿಯಲ್ಲಿ ಟಿಮ್ ಸೌಥ್ ಅವರಿಂದ ಹೇಳಿಕೊಳ್ಳುವಂಥ ಪ್ರದರ್ಶನ ಮೂಡಿಬಂದಿರಲಿಲ್ಲ. ನಾಲ್ಕು ಓವರ್ ಗಳಿಗೆ 48 ರನ್ ನೀಡಿ ವಿಕೆಟ್ ಪಡೆಯದೆ ಬರೀ ಗೈಯಲ್ಲಿ ಹಿಂತಿರುಗಿದ್ದರು. ಎರಡನೇ ಪಂದ್ಯವೂ ಇದೇ ಅಂಗಳದಲ್ಲಿ ನಡೆಯುವುದರಿಂದ ಉಭಯ ತಂಡಗಳು ಮತ್ತೊಮ್ಮೆ ರನ್ ಹೊಳೆ ಹರಿಸಿ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಲು ಸಜ್ಜಾಗುತ್ತಿವೆ.
ಸಂಭಾವ್ಯ ಆಟಗಾರರು
ಭಾರತ: ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್/ಶಿವಂದುಬೆ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ನವದೀಪ್ ಸೈನಿ, ಜಸ್ಪ್ರಿತ್ ಬುಮ್ರಾ.
ನ್ಯೂಜಿಲೆಂಡ್: ಮಾರ್ಟಿನ್ ಗುಪ್ಟಿಲ್, ಟಿಮ್ ಸೀಫರ್ಟ್, ಕೇನ್ ವಿಲಿಯಮ್ಸನ್(ನಾಯಕ), ರಾಸ್ ಟೇಲರ್, ಕಾಲಿನ್ ಡಿ ಗ್ರಾಂಡ್ಹೋಮ್, ಡೆರ್ಲಿ ಮಿಚೆಲ್, ಮಿಚೆಲ್ ಸ್ಯಾಂಟ್ನರ್ , ಇಶ್ ಸೋಧಿ, ಹಮೀಶ್ ಬೆನೆಟ್, ಬ್ಲೈರ್ ಟಿಕ್ಕರ್, ಟಿಮ್ ಸೌಥ್.