ಸಮುದ್ರದ ಅಲೆಗಳ ಅರ್ಭಟ: ಬೋಟ್ಗೆ ಹಾನಿ

ಕಾರವಾರ 12: ಭಾರಿ ಅಲೆಗಳ ಆರ್ಭಟದ ಪರಿಣಾಮ ಬದಿಯಲ್ಲಿ ಕಟ್ಟಲಾದ ಬೋಟುಗಳು ಪರಸ್ಪರ ಬಡಿದು ಶಿವ ಪರಿವಾರ ಹೆಸರಿನ ಬೋಟಿಗೆ ಲಕ್ಷಾಂತರ ರೂ. ಹಾನಿಯಾದ ಘಟನೆ ಇಲ್ಲಿನ ಬೈತಖೋಲ್ ಮೀನುಗಾರಿಕಾ ಬಂದರಿನಲ್ಲಿ ಬುಧವಾರ ತಡರಾತ್ರಿ ನಡೆದಿದೆ.

       ಇಲ್ಲಿನ ಕಾಜುಬಾಗದ ನಾಗೇಶ ಚಂದ್ರಕಾಂತ್ ಮಾಳ್ಸೇಕರ ಮಾಲೀಕತ್ವದ ಶಿವಪರಿವಾರ ಬೋಟು ಬೈತಖೋಲ್ ಮೀನುಗಾರಿಕಾ ಬಂದರಿನಲ್ಲಿ ನಿಲ್ಲಿಸಿಡಲಾಗಿತ್ತು. ಸಾಗರ ಹವಾಮಾನ ವೈಪರೀತ್ಯದಿಂದ ಭಾರಿ ಅಲೆಗಳ ಆರ್ಭಟಕ್ಕೆ ಹೆದರಿ ಸಾಯಂಕಾಲ ಬಂದರಿಗೆ ಏಕಾಏಕಿ ಸೇರಿದ ಎಲ್ಲ ಬೋಟುಗಳನ್ನು ಒತ್ತಟ್ಟಿಗೆ ಕಟ್ಟಲಾಗಿತ್ತು.ಇದರಿಂದ ರಾತ್ರಿ ಸಮಯದಲ್ಲಿ ಪರಸ್ಪರ ಸುತ್ತಮುತ್ತಲಿನ ಬೋಟುಗಳು ಬಡಿದು ಶಿವಪರಿವಾರ ಬೋಟಿನ ಹಿಂಬದಿಯ ಹಲಗೆಗಳು,ಬೋಟ್ ಒಳಗಿನ ಪ್ಲೆಂಜ್, ವಾಂಕ್ಗಳಿಗೆ ಧಕ್ಕೆಯಾಗಿದೆ. ನೀರಿನ ಪೈಪ್ಗಳು ತುಂಡಾಗಿ ಬೋಟ್ನ ಮೇಲ್ಮೈ ಅಲುಗಾಡುತ್ತಿರುವುದರಿಂದ 4 ಲಕ್ಷ ರೂ.ಗಿಂತ ಅಧಿಕ ಹಾನಿಯಾಗಿದೆ ಎಂದು ಬೋಟ್ ಮಾಲೀಕರು ಹೇಳಿದ್ದಾರೆ. ಗುರುವಾರ ಕೂಡ ಬೀಸಿದ ಭಾರಿ ಗಾಳಿ ಮತ್ತು ಅಲೆಗಳಿಂದ ಬೋಟಿಗೆ ಇನ್ನಷ್ಟು ಹಾನಿಯಾಗಿದ್ದು, ಮುಳುಗುವ ಹಂತದಲ್ಲಿದ್ದ ಬೋಟಿಗೆ ಸ್ಥಳೀಯರ ಸಹಾಯದಿಂದ ಬಿಗಿಯಾಗಿ ರೋಪು ಕಟ್ಟಿ ರಕ್ಷಿಸಿಡಲಾಗಿದೆ. ಬೋಟ್ನ್ನು ಮೇಲಕ್ಕೆಳೆದು ದುರಸ್ತಿ ಮಾಡಲು ಲಕ್ಷಾಂತರ ಹಣ ವೆಚ್ಚ ಮಾಡಬೇಕಾಗಿದೆ. ಮೊದಲೇ ಮತ್ಸ್ಯಕ್ಷಾಮದಿಂದ ಮೀನುಗಾರಿಕೆ ನಡೆಸಲಾಗದೇ ಕಂಗಾಲಾಗಿರುವ ನನಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಮೀನುಗಾರಿಕೆ ಇಲಾಖೆ ಪಂಚನಾಮೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಮಾಲೀಕರು ಮನವಿ ಮಾಡಿದ್ದಾರೆ.