ಶಾಲಾ ಸಂಸತ್ತಿನ ಉದ್ಘಾಟನೆ ಸಮಾರಂಭ

ಶಾಲಾ ಸಂಸತ್ತಿನ ಉದ್ಘಾಟನೆ ಸಮಾರಂಭ School Parliament Inauguration Ceremony

ಧಾರವಾಡ 09: ಜನತಾ ಶಿಕ್ಷಣ ಸಮಿತಿಯ ಶ್ರೀ ಮಂಜುನಾಥೇಶ್ವರ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಇದೇ ದಿ. ಜು 9ರಂದು 2025-26 ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಉದ್ಘಾಟನೆಯನ್ನು ಸನ್ನಿಧಿ ಕಲಾ ಕ್ಷೇತ್ರದಲ್ಲಿ ನೆರವೇರಿಸಲಾಯಿತು.  

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಕೆಇ ಬೋರ್ಡ್‌ ಶಾಲೆಯ ಶಿಕ್ಷಕಿ ಹಾಗೂ ಎನ್‌ಸಿಸಿ ಮುಖ್ಯಸ್ಥೆಯಾದ ಮಂಜುಳಾ ಕೋಳಿವಾಡ ಇವರು ಆಗಮಿಸಿದ್ದರು.. ಶಾಲೆಯ ಮುಖ್ಯೋಪಾಧ್ಯಾಯನಿಯರಾದ ರೇಣು ಪಾಟೀಲ್ ಹಾಗೂ ಸಹ ಸಂಯೋಜಕರಾದ ನಿರ್ಮಲಾ ಪಾಟೀಲ್, ಕಮಲಾಕ್ಷಿ ಸಣ್ಣಕ್ಕಿ ಮತ್ತು ಪ್ರಿಯಾಂಕಾ ನಾಯಕ ಇವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.   

ಅತಿಥಿಗಳು ಶಾಲಾ ಸಂಸತ್ತಿನ ಪದಾಧಿಕಾರಿಗಳಿಗೆ ನಾಮಫಲಕಗಳನ್ನು ತೊಡಿಸಿ  ಪ್ರತಿಜ್ಞಾವಿಧಿ ಬೋಧನೆ ಮಾಡಿ ಅವರ ಕರ್ತವ್ಯಗಳಲ್ಲಿ ನಿರತರಾಗುವಂತೆ ಕರೆ ನೀಡಿದರು. ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವ ಮೂಲಕ ತಮ್ಮ ತಮ್ಮ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಕೊಂಡರು. ನಂತರ ಮಾತನಾಡಿದ ಅತಿಥಿಗಳು ಶಾಲೆ ಮತ್ತು ಸಂಸತ್ತಿನ ಪದಾಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ವಿದ್ಯಾರ್ಥಿಗಳಲ್ಲಿ ಶಿಸ್ತು ತುಂಬಾ ಅವಶ್ಯಕ, ಶಾಲೆಯ ಸಮಸ್ತ ಕಾರ್ಯ ಕಲಾಪಗಳು ಸುವ್ಯವಸ್ಥಿತವಾಗಿ ನಡೆಯಲು ಶಾಲಾ ಸಂಸತ್ತು ಬಹಳ ಪ್ರಮುಖ ಎಂಬುದನ್ನು ಕೆಲವು  ನಿದರ್ಶನಗಳ ಮೂಲಕ ತಿಳಿಸಿದರು. ಶಾಲಾ ಸಂಸತ್ತು ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳು , ಆರೋಗ್ಯಯುತ ಪೈಪೋಟಿ ಹಾಗೂ ಗುಂಪಿನಲ್ಲಿ ಹೊಂದಿಕೊಳ್ಳುವ ಮನೋಭಾವವನ್ನು ಬೆಳೆಸುತ್ತದೆ. ದೇಶದ ಭವಿಷ್ಯದ  ನಾಯಕರಾದ ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳ ಪ್ರೇರಣೆ ಪಡೆದು ಉತ್ತಮ ನಾಗರಿಕರಾಗಲು ಕರೆ ನೀಡಿದರು. ಸತತ ಪರಿಶ್ರಮದಿಂದ, ಸಕಾರಾತ್ಮಕ ಶಕ್ತಿಯಿಂದ ಜೀವನದ ಗುರಿಯನ್ನು ಸಾಧಿಸಲು ಸಾಧ್ಯ ಎಂದು ತಿಳಿಸಿದರು.  

ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಪ್ರಾಚಾರ್ಯರಾದ ರೇಣು ಪಾಟೀಲ್ ಅವರು ಸ್ವಾಗತಿಸಿದರು. ವಿದ್ಯಾರ್ಥಿನಿ ಅವನಿ  ಇವಳು ಅತಿಥಿಗಳನ್ನು ಪರಿಚಯಿಸಿದಳು. ಸಂಗೀತ ಶಿಕ್ಷಕಿ ಅಶ್ವಿನಿ ಪತ್ತಾರ  ಹಾಗೂ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯನ್ನು ಹಾಡಿದರು. ಶಿಕ್ಷಕಿ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.