ನೆಮ್ಮದಿಯ ಬದುಕಿಗೆ ಅದ್ಯಾತ್ಮ ಅವಶ್ಯ: ಪಾಟೀಲ

ಬಾಗಲಕೋಟೆ 03: ಜೀವನದಲ್ಲಿ ಬರುವ ಕಷ್ಟ ಸುಖಗಳು, ವೈಭವ ಆಘಾತಗಳನ್ನು ಎದುರಿಸಲು ಸರಸ ವಿರಸಗಳನ್ನು ಸಮರಸವಾಗಿರಿಸಿಕೊಂಡು ನೆಮ್ಮದಿ ಪಡೆಯಬೇಕಾದರೆ ಆದ್ಯಾತ್ಮದ ಚಿಂತನೆ ಅವಶ್ಯವೆಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.

ಅವರು ಬಾಗಲಕೋಟ ತಾಲೂಕಿನ ಯಡಹಳ್ಳಿ ಗ್ರಾಮದ ಅಜಾತ ನಾಗಲಿಂಗೇಶ್ವರ ಮಠದಲ್ಲಿ ಪೂಜ್ಯ ಸಿದ್ದರಾಮ ಶಿವಯೋಗಿಗಳ 44ನೇ ಪುಣ್ಯಾರಾಧನೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಇಂದಿನ ಕಂಪ್ಯೂಟರ ಯುಗವನ್ನು ಬೆನ್ನಟ್ಟಿದ ಜನ ಅಧಿಕಾರಕ್ಕಾಗಿ ಹಣಕ್ಕಾಗಿ ಸ್ವಾರ್ಥ ಜೀವನಕ್ಕೆ ಮಾರು ಹೋಗಿ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಈ ಯಾಂತ್ರಿಕ ಜೀವನದಿಂದ ಮನುಷ್ಯ ತನಗಿರುವ ಶತಾಯುಷ್ಯವನ್ನು ಪೂರೈಸದೇ ರೋಗ ರುಜುನಗಳಿಗೆ ತುತ್ತಾಗಿ ಅಲ್ಪಾಯುಷಿಯಾಗಿ ಅಕಾಲಿಕ ಮರಣ ಹೊಂದುತ್ತಾನೆ ಎಂದರು.

ಹಿಂದೆ ಋಷಿಗಳು ಮುನಿಗಳು, ಶ್ರೀಗಳು ಯೋಗದಿಂದ ಮನಶಕ್ತಿ ಆಸನದಿಂದ ದೈಹಿಕ ಶಕ್ತಿ ಪಡೆದು ಯೋಗಾಸನವೆಂಬ ಕ್ರೀಯೆಯಲ್ಲಿ ತೊಡಗಿ ಮನುಷ್ಯನಿಗೆ ದೊರೆತ 100 ವರ್ಷಗಳನ್ನು ಸಂಪೂರ್ಣ ಪೂರೈಸುತ್ತಿದ್ದರು. ಇದು ಅವರು ನಮಗೆ ನೀಡಿದ ಉತ್ತಮ ಉದಾಹರಣೆಯಾಗಿದೆ. ಲೋಕಕಲ್ಯಾಣಕ್ಕಾಗಿ ಜನಿಸಿದ ಅಂತಹ ಪುಣ್ಯಾತ್ಮರು ಎಲ್ಲಿ ನಿಂತರೋ ಅದು ಸುಕ್ಷೇತ್ರವಾಯಿತು. ಅವರು ಮುಟ್ಟಿದ ನೀರು ಪಾವನವಾಯಿತು. ಅಂತಹ ಮಹಾತ್ಮರಲ್ಲಿ ಸಿದ್ದರಾಮ ಶಿವಯೋಗಿಗಳು ಒಬ್ಬರಾಗಿದ್ದು, ಬಾಗಲಕೋಟ ತಾಲೂಕಿನಲ್ಲಿಯೇ ವಿಹಾರಿಗಳಿಗೆ ಆದ್ಯಾತ್ಮಕ ಚಿಂತನೆ ಮಾಡುವವರಿಗೆ ಈ ಸುಂದರ ಪರಿಸರದ ಮಠ ಪ್ರಸಿದ್ದಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಠದ ಪೀಠಾಧಿಪತಿಗಳಾದ ಬಸವಾನಂದ ಭಾರತಿ ಸ್ವಾಮಿಗಳು, ಸಾನಿಧ್ಯ ವಹಿಸಿದ್ದ ಕಟ್ಣೂರಿನ ಡಾ.ಚನ್ನಬಸವ ದೇಶಿಕೇಂದ್ರ ಶ್ರಿಗಳು, ಅನಗವಾಡಿಯ ಮಾತೋಶ್ರೀ ಅನಸೂಯಾ, ಗ್ರಾ.ಪಂ ಸದಸ್ಯ ಮೇಲಗಿರಿಯಪ್ಪ ನೀಲಣ್ಣವರ ಸೇರಿದಂತೆ ಇತರರು ಇದ್ದರು.