ಕನ್ನಡದ ಸಂತ : ಚಿಂಚಣಿಯ ಅಲ್ಲಮಪ್ರಭು ಶ್ರೀಗಳು

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂಬ ಕವಿವಾಣಿಯಂತೆಯೇ ಮಠಾಧೀಶರೊಬ್ಬರು ಕನ್ನಡ ಜಾಗೃತಿ, ಪುಸ್ತಕ ಮಾಲೆ, ಕನ್ನಡದ ತೇರು ಹೀಗೆ ಕನ್ನಡ ಭಾಷೆಯನ್ನು ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದ ಮರಾಠಿ ಬಹುಭಾಷಿಕ ಹಳ್ಳಿಗಳಲ್ಲಿ ಕನ್ನಡವನ್ನು ಕಟ್ಟಿ ಬೆಳೆಸುವ ಕಾಯಕದಲ್ಲಿ ತೊಡಗಿದ್ದಾರೆ. ಈ ನಿಟ್ಟಿನಲ್ಲಿ ಗಡಿನಾಡಿನ ಕನ್ನಡವನ್ನು ಭದ್ರಗೊಳಿಸುವಲ್ಲಿ ಸಮರ​‍್ಿಸಿಕೊಂಡವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ಅಲ್ಲಮಪ್ರಭು ಸಿದ್ಧಸಂಸ್ಥಾನಪಠದ ಶ್ರೀ ಮ.ನಿ.ಪ್ರ.ಸ್ವ ಅಲ್ಲಮಪ್ರಭು ಮಹಾಸ್ವಾಮಿಗಳು. ಕನ್ನಡ ಕಾಯಕದಿಂದಲೇ ಚಿಂಚಣಿ ಮಠ ನಾಡಿನಲ್ಲಿ ಕನ್ನಡಮಠ ಎಂದೇ ಪ್ರಸಿದ್ಧಿಯಾಗಿದೆ. 

ಅಲ್ಲಮಪ್ರಭು ಸ್ವಾಮಿಗಳು ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡದಲ್ಲಿ 22 ಜೂನ್ 1961ರಂದು ಜನಿಸಿದರು. ತಂದೆ ಗುರುಲಿಂಗಯ್ಯ ಹಿರೇಮಠ, ತಾಯಿ ಬಸಮ್ಮ. ಅವರ ಪೂರ್ವಾಶ್ರಮದ ಹೆಸರು ಶಂಕರಯ್ಯ. ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಗಜೇಂದ್ರಗಡದಲ್ಲಿ ಪೂರೈಸಿದರು. ನಂತರ ಮನೆತನದ ವೈದಿಕ ಕಾರ್ಯಗಳಿಗೆ ನೆರವಾಗಲು ಗದುಗಿನ ತೋಂಟಾದಾರ್ಯಮಠದ ವೈದಿಕ ಶಾಲೆಗೆ ಸೇರಿದರು. ಪೂಜ್ಯರ ಆಶ್ರಯದಲ್ಲಿ ತನ್ಮಯತೆಯಿಂದ ಆಧ್ಯಾತ್ಮದಲ್ಲಿ ತೊಡಗಿಕೊಂಡರು. ಅವರು ಗದುಗಿನ ತೋಂಟಾದಾರ್ಯ ಶ್ರೀಗಳ ದಿವ್ಯಕೃಪೆಗೆ ಪಾತ್ರರಾದರು. ಶ್ರೀಗಳು ‘ನೀನು ಸನ್ಯಾಸಿ ಆಗಬೇಕು, ಸಮಾಜದ ಸಂಪತ್ತು ನೀನಾಗಬೇಕು’ ಎಂದು ಶಂಕ್ರರಯ್ಯನವರಿಗೆ ಅಪ್ಪಣೆ ಮಾಡಿದರು. ಅವರ ಕರ್ತವ್ಯ ಶಕ್ತಿಗೆ ಮಾರು ಹೋಗಿ ಜಂಗಮವಟುವಾಗಿ, ತೋಂಟಾದಾರ್ಯ ಶಾಖಾ ಮಠದ ಶಿರೋಳ ಮಠದ ಅಧಿಪತಿಗಳಾಗಿ ನೇಮಕಗೊಂಡರು.  

ಗದುಗಿನ ತೋಂಟಾದಾರ್ಯ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಶ್ರೀ ಮಠದ ಜಾತ್ರಯನ್ನು ರೊಟ್ಟಿ ಜಾತ್ರಯನ್ನಾಗಿಸಿದ್ದಾರೆ. ಮಠದ ಏಳ್ಗೆಯ ಮಾಡುತ್ತಿರುವ ಸಂದರ್ಭದಲ್ಲಿ ಗದುಗಿನ ಶ್ರೀಗಳ ಅಣತಿಯಂತೆ ನಿಡಸೋಸಿ ಮತ್ತು ನಾಗನೂರು ಶ್ರೀಗಳು ಶಿರೋಳ ಮಠದ ಶ್ರೀಗಳನ್ನು ಚಿಂಚಣಿ ಮಠದ ಪೀಠಾಧಿಪತಿಯನ್ನಾಗಿ ನೇಮಿಸಿದರು, ಜಗದ್ಗುರುಗಳ ಅಪ್ಪಣೆಯಂತೆ 1994ರ ಜುಲೈ 1ರಂದು ಚಿಂಚಣಿಯ ಸಿದ್ಧ ಸಂಸ್ಥಾನಮಠದ ಪೀಠಾಧಿಕಾರವನ್ನು ವಹಿಸಿಕೊಂಡು, ಅಲ್ಲಮಪ್ರಭು ಮಹಾಸ್ವಾಮೀಜಿ ಎಂಬ ಅಭಿದಾನದೊಂದಿಗೆ ಬಸವಕಾಯಕ ಪ್ರಾರಂಭಿಸಿದರು. ಶಿರೋಳ ಮಠದಿಂದ ಚಿಂಚಣಿ ಮಠಕ್ಕೆ ಹೊರಡುವಾಗ ಗದುಗಿನ ಜಗದ್ಗುರುಗಳು “ಲಿಂಗಾಯತರಿಗೆ ಬಸವಣ್ಣನೇ ಧರ್ಮಗುರುಗಳು. ಅವರು ವಚನಗಳನ್ನು ರಚಿಸಿ ಕನ್ನಡವನ್ನು ದೇವ ಭಾಷೆಯನ್ನಾಗಿ ಮಾಡಿದರು. ಕನ್ನಡದ ಕೆಲಸವೆಂದರೆ ಬಸವಣ್ಣನ ಕೆಲಸ. ನೀವು ಚಿಂಚಣಿ ಮಠಕ್ಕೆ ಹೋಗುತ್ತಿದ್ದೀರಿ, ಆದರೆ ಅಲ್ಲಿ ಕನ್ನಡ ಪರಿಸ್ಥಿತಿ ಸರಿ ಇಲ್ಲ. ಕನ್ನಡ ಕಂಪನ್ನು ಅಲ್ಲಿ ಪಸರಿಸಬೇಕಾಗಿದೆ” ಎಂದು ಅಲ್ಲಮಪ್ರಭು ಸ್ವಾಮಿಗಳಿಗೆ ಕನ್ನಡದ ದೀಕ್ಷೆ ನೀಡಿ ಕಳುಹಿಸಿದರು. ಶ್ರೀಗಳಿಗೆ ಗುರುದೀಕ್ಷೆಗೆ ಬದಲಾಗಿ ಕನ್ನಡ ದೀಕ್ಷೆ ಕೊಟ್ಟರು.   

ಗುರುಗಳ ಮಾತಿಗೆ ಬದ್ಧರಾಗಿ ಅಲ್ಲಮಪ್ರಭು ಶ್ರೀಗಳು 1997ರಿಂದ ಗಡಿನಾಡಿನ ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಬಿತ್ತುವ ಕಾಯಕದಲ್ಲಿ ಮಗ್ನರಾದರು. ಮರಾಠಿ ಭಾಷಾ ಪ್ರಾಬಲ್ಯವಿರುವ ಹಳ್ಳಿಗಳಲ್ಲಿ ಕನ್ನಡದ ಕಂಪನ್ನು ಪಸರಿಸುವುದು ಅಸಾಧ್ಯವೇ ಸರಿ. ಆದರೆ ಅಲ್ಲಮಪ್ರಭು ಶ್ರೀಗಳು ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ಮರಾಠಿ ಹಳ್ಳಿಗಳಲ್ಲಿ ಕನ್ನಡ ಪ್ರೇಮ ಬೆಳೆಸಿದ್ದಾರೆ. ಚಿಕ್ಕೋಡಿಯ ಗಡಿಯ ಹಳ್ಳಿಗಳಾದ ಚಾಂದಶಿರದವಾಡ, ಜನವಾಡ, ಬೋರಗಾಂವ, ಕುನ್ನೂರು, ಕಾರದಗಾ, ಕಾಣಕಾಪೂರ, ಮಾಂಗೂರ, ಕಸನಾಳ ಮುಂತಾದ ಮರಾಠಿ ಪ್ರಾಬಲ್ಯ ಹೊಂದಿದ ಹಳ್ಳಿಗಳಲ್ಲಿ ಶ್ರೀಗಳು ಅಲೆದಾಡಿ ಕನ್ನಡದ ಕೆಚ್ಚನ್ನು ಬೆಳೆಸಿದ್ದಾರೆ, ಚಿಕ್ಕೋಡಿ ಅಷ್ಟೇ ಅಲ್ಲ, ನಿಪ್ಪಾಣಿಯಲ್ಲೂ ಸಾಕಷ್ಟು ಬದಲಾವಣೆ ತಂದಿದ್ದಾರೆ. ನಾಡಿನ ಖ್ಯಾತ ಚಿಂತಕರನ್ನು, ಸಾಹಿತಿ, ಮಠಾಧೀಶರನ್ನು ಮತ್ತು ಕಲಾವಿದರನ್ನು ಗಡಿನಾಡಿಗೆ ಕರೆತಂದು ಕನ್ನಡ ಭಾಷಾ ಪ್ರಭಾವ ಹೆಚ್ಚುವಂತೆ ಮಾಡಿದ್ದಾರೆ. ಶ್ರೀಗಳು ಕನ್ನಡ ಪರವಾದ ಪುರಾತನ ದಾಖಲೆಗಳನ್ನು ಸಂಗ್ರಹಿಸುವಲ್ಲಿ ವಿಶೇಷ ಆಸಕ್ತಿವುಳ್ಳವರಾಗಿದ್ದು, ಕನ್ನಡದ ಇತಿಹಾಸವನ್ನು ತಿಳಿಸುವ ಅಪರೂಪದ ದಾಖಲೆಗಳು ಅವರ ಬಳಿ ಇವೆ. ಕನ್ನಡ ಪರ ಚಿಂತನೆಯ ಸಮಾನ ಮನಸ್ಕರನ್ನು ಒಳಗೊಂಡ ಗಡಿ ಕನ್ನಡಗರ ಬಳಗ ಸ್ಥಾಪಿಸಿಕೊಂಡು, ಕನ್ನಡ ಭಾಷೆ, ಸಂಸ್ಕೃತಿ ಶಿಕ್ಷಣ ಪ್ರಸಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲಮಪ್ರಭು ಶ್ರೀಗಳು ಕಳೆದ 25 ವರ್ಷಗಳಿಂದ ಕನ್ನಡದ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ವಿಧವಿಧವಾದ ಕನ್ನಡದ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ಮಕ್ಕಳು ಬೆಳೆದಂತೆ ಕನ್ನಡವು ಬೆಳೆಯಬೇಕು ಎಂಬ ಉದ್ದೇಶದಿಂದ ಮಕ್ಕಳಿಗಾಗಿ ಕನ್ನಡ ಸಾಹಿತಿಗಳ ಹೆಸರು ಬರೆಯುವ ಸ್ಪರ್ಧೆ, ಭಾವಗೀತೆ, ಭಾಷಣ  ಸ್ಪರ್ಧೆ, ಪ್ರಬಂಧ, ಕನ್ನಡ ಪುಸ್ತಕಗಳ ಪ್ರಕಟಣೆ, ಮಠದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ, ಸಿರಿಗನ್ನಡ ತೇರು ಎಳೆಯುವಂತಹ ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತ ಬಂದಿವೆ. ಕನ್ನಡದ ಹೆಸರಿನಲ್ಲಿ ಮಠದಲ್ಲಿ ಸಿರಿಗನ್ನಡ ತೇರನ್ನು ನಿರ್ಮಿಸಲಾಗಿದೆ. ಅಪ್ಪಟ ಕನ್ನಡ ರಥವಾಗಿರುವ ಇದರಲ್ಲಿ 32 ಕನ್ನಡ ಸಾಹಿತಿಗಳ ಚಿತ್ರಗಳನ್ನು ಮತ್ತು 16 ಕನ್ನಡದ ಘೋಷಣೆಗಳನ್ನು ಕೆತ್ತಲಾಗಿದೆ. ತೇರಿನ 08 ಭಾಗಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಹಾಕಲಾಗಿದೆ. ಇದರ ನಡುವೆಯೇ ತಾಯಿ ಭುವನೇಶ್ವರಿ ಮೂರ್ತಿಯನ್ನು ಕೂಡ್ರಿಸಿ ತೇರನ್ನು ಸಂಭ್ರಮದಿಂದ ಎಳೆಯಲಾಗುತ್ತದೆ. ಈ ಸಿರಿಗನ್ನಡ ರಥಕ್ಕೆ ಚಿಂಚಣಿ ರೈತರೇ ಅಂದಾಜು 06 ಲಕ್ಷ ರೂಪಾಯಿಗಳ ಮೌಲ್ಯದ ಸಾಗವಾನಿ ಮರದ ಕಟ್ಟಿಗೆಯನ್ನು ದಾನವಾಗಿ ನೀಡಿದ್ದಾರೆ. ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಬಸಪ್ಪ ಬಡಿಗೇರ ಕನ್ನಡ ರಥವನ್ನು ನಿರ್ಮಿಸಿದ್ದಾರೆ. 2012ರಿಂದ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಈ ರಥವನ್ನು ಕನ್ನಡಿಗರೇ ಸೇರಿ ಎಳೆಯುತ್ತಾರೆ.  

ಡಾ.ಎಂ.ಎಂ.ಕಲುಬುರ್ಗಿಯವರ ಇಚ್ಚೆಯಂತೆ ಅಲ್ಲಪ್ರಭು ಶ್ರೀಗಳು ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಇದುವರೆಗೆ 48 ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಆಧುನಿಕ ಕರ್ನಾಟಕದ ಆತಂಕಗಳು, ಕನ್ನಡತನ ಮತ್ತು ಭಾರತೀಯತೆ, ಮಹಾರಾಜನ ವರದಿ ಒಂದು ಅವಲೋಕನ, ಕನ್ನಡ ಕೋಟೆ ಕೆ.ಎಲ್‌.ಇ., ಸಂಪ್ರದಾಯದ ಇತಿಹಾಸ, ರಂಗಭೂಮಿ-ಕನ್ನಡ ಸಂವೇದನೆ, ನಮ್ಮ ನಾಡು, ನುಡಿ ಮತ್ತು ಗಡಿ, ಕನ್ನಡ ಕಟ್ಟೋಣ, ಕರ್ನಾಟಕ ಏಕೀಕರಣ ಚಳುವಳಿ ಮತ್ತು ಮಹಿಳೆ, ಮಹಾದಾಯಿ ನೀರಿಗಾಗಿ ಹೋರಾಟ, ಕನ್ನಡದ ಚಿಂತನೆ ಮತ್ತು ಪರಂಪರೆ, ಕನ್ನಡ ಕಟ್ಟೋಣ, ಚೆಲುವ ಕನ್ನಡ ನಾಡು, ಕರ್ನಾಟಕದ ಹಿಂದೂಸ್ತಾನಿ ಸಂಗೀತಗಾರರು, ಕನ್ನಡದ ಕೂಲಿ ರಾಮ ಜಾಧವ, ಕರ್ನಾಟಕದ ಗಂಧರ್ವರು, ಕವಿ ಕಣವಿ ಸಂದರ್ಶನ, ಕನ್ನಡ ಜಗದ್ಗುರು, ಕನ್ನಡ-ಕನ್ನಡಿಗ-ಕರ್ನಾಟಕ, ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಅಧ್ಯಯನಗಳ ತಾತ್ವಿಕತೆ, ಹೀಗೆ ಮೌಲಿಕ ಕೃತಿಗಳನ್ನು ಸದಾನಂರ ಕನವಳ್ಳಿ, ಡಾ.ಅನಿಲ ಕಮತಿ, ಡಾ.ರಾಮಕೃಷ್ಣ ಮರಾಠೆ, ಡಾ.ಜಿ.ಎಂ.ಹೆಗಡೆ, ಡಾ.ಪಿ.ಜಿ.ಕೆಂಪಣ್ಣವರ, ಡಾ.ಓಂಕಾರ ಕಾಕಡೆ, ಬಿ.ಎಸ್‌. ಗವಿಮಠ, ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ವಿಜಯಲಕ್ಷ್ಮೀ ಭೋಸಲೆ, ಡಾ.ರತ್ನಶೀಲ ಗುರಡ್ಡಿ ಮುಂತಾದ ಲೇಖಕರಿಂದ ಹೊರತಂದಿದ್ದಾರೆ. ಇನ್ನೊಂದು ಸೋಜಿಗವೆಂದರೆ ಯಾವ ಕೃತಿಯಲ್ಲಿಯೂ ಶ್ರೀಗಳ ಒಂದು ಫೋಟೋ ಸಹ ಇಲ್ಲ. ಎಲ್ಲೂ ಮಠದ ಕುರಿತು ವಿವರಣೆಗಳಿಲ್ಲ. ಪ್ರತಿ ವರ್ಷ ಅತ್ಯಮೂಲ್ಯವಾದ ಕನ್ನಡಪರ ಪುಸ್ತಕಗಳನ್ನು ಪ್ರಕಟಿಸುತ್ತ ಬಂದಿದ್ದಾರೆ. ಕನ್ನಡ ಜಾಗೃತಿ ಪುಸ್ತಕ ಮಾಲೆಯ ಹಲವಾರು ಕೃತಿಗಳನ್ನು ಕರ್ನಾಟಕ ಸರಕಾರದ ಸಚಿವಾಲಯ ಖರೀದಿಸಿ ಶಾಸಕರಿಗೆ ಓದಲು ಒದಗಿಸಿದ್ದು, ಈ ಕೃತಿಗಳ ಮೌಲಿಕತೆಗೆ ನೀದರ್ಶನವಾಗಿದೆ.  

ಅಲ್ಲಮಪ್ರಭು ಶ್ರೀಗಳು ಕೇವಲ ಪುಸ್ತಕ ಪ್ರಕಟನೆ ಮಾಡಿಕೊಂಡು ಕುಳಿತುಕೊಳ್ಳಲಿಲ್ಲ. ಕನ್ನಡದ ಕಾರ್ಯಕ್ರಮ ಎಲ್ಲಿದ್ದರೂ, ಯಾರೂ ಮಾಡಿದರೂ ಸ್ವಾಮೀಜಿ ಅಲ್ಲಿಗೆ ಹೋಗುತ್ತಾರೆ. ನಮ್ಮದೇ ನಾಡಿನಲ್ಲಿ ತಬ್ಬಲಿತನ ಅನುಭವಿಸುತ್ತಿರುವ ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಾರೆ. ಕನ್ನಡಕ್ಕೆ, ಕನ್ನಡತನಕ್ಕೆ ಅನ್ಯಾಯವಾದಾಗ ಸ್ವಾಮೀಜಿ ಬೀದಿಗಿಳಿದು ಹೋರಾಡುತ್ತಾರೆ. ಕನ್ನಡ ಪರ ಸಂಘಟನೆಗಳಿಗೆ ಸ್ವಾಮೀಜಿಯೇ ಇಲ್ಲಿ ಸ್ಪೂರ್ತಿ, ಚಳುವಳಿಗಳಿಗೆ ಅವರೇ ಮಾರ್ಗದರ್ಶಿಯಾಗಿದ್ದಾರೆ. ರಾಜ್ಯೋತ್ಸವ ಆಚರಣೆ, ಗಡಿನಾಡ ಉತ್ಸವಗಳು, ಕನ್ನಡ ದಿನಪತ್ರಿಕೆಗಳ ಪ್ರಚಾರ, ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಕನ್ನಡದ ಸಂತರೆನಿಸಿಕೊಂಡಿದ್ದಾರೆ. ಶ್ರೀಗಳ ಕನ್ನಡ ಜಾಗೃತಿ ಕಾರ್ಯವಂತೂ ಶ್ಲಾಘನೀಯ. ಗಡಿನಾಡಿನ ಹಳ್ಳಿಗಳಲ್ಲಿ ಕನ್ನಡ ವಾತಾವರಣವನ್ನು ಮೂಡಿಸುವಲ್ಲಿ, ಸಾಮಾಜಿಕ-ಸಾಹಿತ್ಯಿಕ-ಸಾಂಸ್ಕೃತಿಕ-ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಶ್ರೀಗಳ ಪರಿಶ್ರಮ ಅನನ್ಯವಾದುದು. ಅವರದು ಅವಿರತ ಅನುಪಮ ಸೇವೆ. ಸಂರಿ​‍್ಕಸಿ 9741266454.  

- * * * -