ಕಾರವಾರ 15: ಸಂತ ಸೇವಾಲಾಲ್ ಅವರು ಹಿಂದುಳಿದ ವರ್ಗದಿಂದ ಬಂದವರು ಅವರು ಅಲೆಮಾರಿ ಜೀವನವನ್ನು ಸಾಗಿಸುತ್ತಿದ್ದವರು, ಸಂತರಾಗಿ ಪರಿವರ್ತನೆಗೊಂಡು ಜೀವನ್ನುದ್ದಕ್ಕೂ ಬ್ರಹ್ಮಚಾರಿಯಾಗಿಯೇ ಬದುಕನ್ನು ಸಾಗಿಸಿದವರು, ಅಂದಿನ ಕಾಲದಲ್ಲಿ ಮೇಲು- ಕೀಲು, ಜಾತಿ ಪದ್ದತಿ, ಮಹಿಳೆಯರಿಗೆ ಸಮಾನತೆ ದೊರಕಿಸಲು, ದೀನದಲಿತರ ಪರವಾಗಿ, ಸಮಾಜದ ಏಳಿಗೆ ಮತ್ತು ಅಭಿವೃದ್ಧಿಗೆ ಹೋರಾಡಿದ್ದು, ಅವರ ತತ್ವಗಳು ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.
ಅವರು ಶನಿವಾರ ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿಯನ್ನು ಸಂತ ಸೇವಾಲಾಲ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಸಂತ ಸೇವಲಾಲ್ ಮಹಾರಾಜ್ ಅವರು ನಮ್ಮ ರಾಜ್ಯದವರು ಎಂಬುವುದು ಹೆಮ್ಮೆಯ ವಿಷಯವಾಗಿದೆ, ಅವರು ತಮ್ಮ ಅನೇಕ ವಿಚಾರ ಧಾರೆಗಳನ್ನು ಇಡೀ ಪ್ರಪಂಚಕ್ಕೆ ಪಸರಿಸಿದ್ದು, ಅನೇಕ ಲಾವಣಿಗಳನ್ನು ಬರೆದಿದ್ದಾರೆ. ಸಂತರು ವ್ಯಾಪರಕ್ಕಾಗಿ ಮಸಾಲ ಪದಾರ್ಥಗಳನ್ನು, ಮೇಡಿಸಿನ್ (ಓಷಧಿ), ಉಪ್ಪು ಇನ್ನಿತರೆ ಸಾಮಾಗ್ರಿಗಳನ್ನು ಸಾಗಾಟ ಮಾಡಲು ಅರಣ್ಯ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳಲ್ಲಿ ಸಂಚಾರ ಮಾಡುತ್ತಿದ್ದರು. ದೇಶದ ಎಲ್ಲಾ ರಾಜ್ಯದಲ್ಲಿ ಕೂಡ ಲಂಬಾಣಿ ಸಮುದಾಯವನ್ನು ಕಾಣಬಹುದಾಗಿದ್ದು, ಲಂಬಾಣಿ ಸಮುದಾಯದ ವೇಷ ಭೂಷಣ, ನೃತ್ಯ ಹಾಗೂ ಭಾಷೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದರು.ಸಂತ ಸೇವಾಲಾಲರು ಈಗಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಹೋಬಳಿಯ ಸೂರಗೊಂಡನ ಕೊಪ್ಪ ಎಂಬಲ್ಲಿ ಜನಿಸಿದರು. ಸೇವಾಲಾಲರು ತಮ್ಮ ಲೀಲೆಗಳ ಹಾಗೂ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನವನ್ನು ಪಡೆದರು. ಅಲ್ಲದೇ ಮರಿಯಮ್ಮ ದೇವಿಯ ಆರಾಧಕರಾಗಿ ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿಯೇ ಉಳಿದರು ಎಂದು ಹೇಳಿದರು.
ಸೇವಾಲಾಲ್ ಒಬ್ಬ ದನಗಾಯಿ ಗೋಪಾಲಕನಾಗಿ ತಮ್ಮ ಜೀವನದ ಅನುಭವವನ್ನು ತಮ್ಮ ತತ್ವದ ಮೂಲಕ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದರು. ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದರು. ಇದಲ್ಲದೆ ಮಾನವ ಜನ್ಮ ಪವಿತ್ರವಾದದ್ದು ಇದನ್ನು ಹಾಳು ಮಾಡಿಕೊಳ್ಳಬೇಡಿ, ವ್ಯಸನಗಳಿಂದ ದೂರವಿರಿ ಎಂದು ತಿಳಿಸಿದರು.ದೇವರಲ್ಲಿ ಭಕ್ತಿ ಇಟ್ಟರೇ ವಿಷವು ಕೂಡ ಅಮೃತವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟ ಮಹಾ ಪವಾಡ ಪುರುಷ ಇವರ ವಿಚಾರ ಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗೋಣ ಎಂದರು. ಸರಸ್ಪತಿ ವಿದ್ಯಾಲಯದ ವಿದ್ಯಾರ್ಥಿನಿ ರೇಣುಕಾ ಕಲ್ಲಪ್ಪಾ ಸಾತನ್ನವರ ಶ್ರೀ ಸಂತ ಸೇವಾಲಾಲ್ ಅವರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ಅಧಿಕಾರಿ ಮಂಗಲಾ ನಾಯ್ಕ, ಲಂಬಾಣಿ ಸಮಾಜದ ಜಿಲ್ಲಾ ಅಧ್ಯಕ್ಷ ಸುರೇಶ್ ನಾಯ್ಕ, ಶಿಕ್ಷಕ ಮಹಾದೇವ , ಲಂಬಾಣಿ ಸಮುದಾಯದ ಮುಂಖಡರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು, ಸರಸ್ಪತಿ ವಿದ್ಯಾಲಯದ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.