ಸಂಜು ಸ್ಯಾಮ್ಸನ್ ದ್ವಿಶತಕ: ಗೋವಾಗೆ 388 ರನ್ ಗುರಿ

ಬೆಂಗಳೂರು, ಅ 12:    ಯುವ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್(ಔಟಾಗದೆ 212 ರನ್) ಅವರು ವಿಜಯ್ ಹಜಾರೆ ಟ್ರೋಫಿಯ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿ ಗೋವಾ ವಿರುದ್ಧ ದ್ವಿತತಕ ಸಿಡಿಸಿದ್ದಾರೆ. ಜತೆಗೆ, ಇವರಿಗೆ ಸಾಥ್ ನೀಡಿದ ಸಚಿನ್ ಬೇಬಿ (127 ರನ್) ಶತಕ ಬಾರಿಸಿದ್ದಾರೆ. 

ನಗರದ ಹೊರವಲಯದಲ್ಲಿರುವ ಕೆಎಸ್ಸಿಎ ಆಲೂರು ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೇರಳ ತಂಡ ಸಂಜು ಸ್ಯಾಮ್ಸನ್ ದ್ವಿಶತಕ ಹಾಗೂ ಸಚಿನ್ ಬೇಬಿ ಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 377 ರನ್ ದಾಖಲಿಸಿದೆ. ಆ ಮೂಲಕ ಗೋವಾ ತಂಡಕ್ಕೆ 378 ರನ್ ಕಠಿಣ ಗುರಿ ನೀಡಿದೆ. 

ಆರಂಭಿಕರಾಗಿ ಕಣಕ್ಕೆ ಇಳಿದ ರಾಬಿನ್ ಉತ್ತಪ್ಪ ಹಾಗೂ ವಿಷ್ಣು ವಿನೋದ್ ಜೋಡಿ ಬಹುಬೇಗ ವಿಕೆಟ್ ಕಳೆದುಕೊಂಡಿತು. ಕಳಪೆ ಲಯದಲ್ಲಿರುವ ರಾಬಿನ್ ಉತ್ತಪ್ಪ ಅವರು 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ. ಇವರ ಹಿಂದೆಯೇ ವಿಷ್ಣು ವಿನೋದ್ 7 ರನ್ ಗಳಿಸಿ ಔಟ್ ಆದರು.  

 ಸಂಜು-ವಿಷ್ಣು ಅಮೋಘ ಜತಯಾಟ: 

ಮೂರನೇ ವಿಕೆಟ್ಗೆ ಜತೆಯಾದ ಸಂಜು ಸ್ಯಾಮ್ಸನ್ ಹಾಗೂ ಸಚಿನ್ ಬೇಬಿ ಜೋಡಿ ಅಮೋಘ ಬ್ಯಾಟಿಂಗ್ ಮಾಡಿತು. ದೀರ್ಘ ಕಾಲ ಬ್ಯಾಟಿಂಗ್ ಮಾಡಿದ ಈ ಜೋಡಿ ಗೋವಾ ಬೌಲರ್ಗಳನ್ನು ಮನಬಂದಂತೆ ಥಣಿಸಿದರು. ಈ ಜೋಡಿ 338 ರನ್ ಜತೆಯಾಟವಾಡುವ ಮೂಲಕ ತಂಡದ ಮೊತ್ತದ ಏರಿಕೆಗೆ ಕಾರಣವಾಯಿತು.  

ಅದ್ಭುತ ಬ್ಯಾಟಿಂಗ್ ಲಯದಲ್ಲಿರುವ 24ರ ಪ್ರಾಯದ ಸಂಜು ಸ್ಯಾಮ್ಸನ್ ಅವರು ಗೋವಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಕೇವಲ 129 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 21 ಬೌಂಡರಿಯೊಂದಿಗೆ ಲಿಸ್ಟ್ ಎ ನ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದರು. ಪ್ರಸಕ್ತ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿಯ ಮೊದಲನೇ ದ್ವಿಶತಕವಾಯಿತು. 

ಇವರಿಗೆ ದೀರ್ಘ ಕಾಲ ಸಾಥ್ ನೀಡಿದ ಸಚಿನ್ ಬೇಬಿ ಕೂಡ ಅಮೋಘ ಬ್ಯಾಟಿಂಗ್ ಮಾಡಿದರು. 135 ಎಸೆತಗಳನ್ನು ಎದುರಿಸಿದ ಅವರು ನಾಲ್ಕು ಸಿಕ್ಸರ್ ಹಾಗೂ ಏಳು ಬೌಂಡರಿಯೊಂದಿಗೆ 127 ರನ್ ಗಳಿಸಿ ಶತಕ ಸಿಡಿಸಿದರು. 

ಸಂಕ್ಷಿಪ್ತ ಸ್ಕೋರ್ 

ಕೇರಳ: 50 ಓವರ್ ಗಳಲ್ಲಿ 377/3 (ಸಂಜು ಸ್ಯಾಮ್ಸನ್ ಔಟಾಗದೆ 212, ಸಚಿನ್ ಬೇಬಿ 127; ದರ್ಶನ್ ಮಿಸಾಲ್ 79 ಕ್ಕೆ 1, ಲಕ್ಷ್ಯ ಗಾರ್ಗ್ 73 ಕ್ಕೆ 1)