ಬೆಂಗಳೂರು, ನ 10 : ರಾಜ್ಯದಲ್ಲಿ 15 ಅನರ್ಹ ಶಾಸಕರಿಂದ ತೆರವಾಗಿರುವ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸೋಮವಾರದಿಂದ ನೀತಿ ಸಂಹಿತೆ ಜಾರಿಗೆ ಬರಲಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಉಪಚುನಾವಣಾ ಕ್ಷೇತ್ರಗಳಿಗೆ ಸೀಮಿತವಾಗಿ ನೀತಿ ಸಂಹಿತೆ ಜಾರಿಯಾಗಲಿದೆ. ಜೊತೆಗೆ, ಮುಕ್ತ ಹಾಗು ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೇರೂರು, ರಾಣೆಬೆನ್ನೂರು, ವಿಜಯ ನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ.ಆರ್. ಪೇಟೆ, ಹುಣಸೂರು ಕ್ಷೇತ್ರಗಳಲ್ಲಿ ಡಿಸೆಂಬರ್ 5ರಂದು ಚುನಾವಣೆ ನಡೆಯಲಿದೆ. ಈ ಹಿಂದೆ ಚುನಾವಣಾ ಘೋಷಣೆಯಾಗಿದ್ದಾಗ ಸಲ್ಲಿಕೆಯಾಗಿದ್ದ 29 ನಾಮಪತ್ರಗಳನ್ನು ಕೂಡ ಈ ಚುನಾವಣೆಗೆ ಪರಿಗಣಿಸಲಾಗುವುದು. ಉಳಿದಂತೆ ಸೋಮವಾರದಿಂದ ನ. 18ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ನ.19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಡಿ. 5ರಂದು ಗುರುವಾರ ಮತದಾನ ನಡೆಸಲಿದ್ದು, ಡಿ.9ರಂದು ಗುರುವಾರ ಮತ ಎಣಿಕೆ ನಡೆಯಲಿದೆ. ಡಿ.11ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸಂಜೀವ್ ಕುಮಾರ್ ತಿಳಿಸಿದರು. ಈಗಾಗಲೇ ಸಲ್ಲಿಕೆಯಾಗಿರುವ 29 ನಾಮಪತ್ರಗಳ ಪೈಕಿ 15 ರಾಷ್ಟ್ರೀಯ ಪಕ್ಷಗಳೂ, 3 ನೋಂದಾಯಿತ ಹಾಗೂ ಗುರುತಿಸಿಕೊಳ್ಳದ ಹಾಗೂ 11 ಪಕ್ಷೇತರರ ಅಭ್ಯರ್ಥಿಗಳ ನಾಮಪತ್ರಗಳಾಗಿವೆ ಎಂದರು. ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರ ಮಾತ್ರ ಮತದಾನಕ್ಕೆ ಅವಕಾಶ ಇದೆ. ಮತದಾರರು ಆಯೋಗ ನಿಗದಿಪಡಿಸಿದ ಯಾವುದಾದರೂ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು. ಮತದಾನಕ್ಕಾಗಿ 4185 ಮತಗಟ್ಟೆಗಳನ್ನು ಸಿದ್ದ ಮಾಡಿಕೊಳ್ಳಲಾಗಿದೆ. ಇದರಲ್ಲಿ ಯಶವಂತಪುರ ಅತಿ ಹೆಚ್ಚು 461 ಮತ್ತು ಶಿವಾಜಿನಗರ ಅತಿ ಕಡಿಮೆ 193 ಮತಗಟ್ಟೆಗಳನ್ನು ಹೊಂದಿರುವ ಕ್ಷೇತ್ರಗಳಾಗಿವೆ ಎಂದು ಮಾಹಿತಿ ನೀಡಿದರು. ಉಪಚುನಾವಣೆಯಲ್ಲಿ ಒಟ್ಟು 19,12,791 ಪುರುಷ ಮತದಾರರು, 18,37,375 ಮಹಿಳಾ ಮತದಾರರು, 399 ಇತರೆ ಸೇರಿ ಒಟ್ಟು 37,50,565 ಮತದಾರರು ಇದ್ದಾರೆ. ಒಟ್ಟು 22,598 ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಈ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸುಧಾರಿತ ಎಂ3 ಇವಿಎಂಗಳನ್ನು ಅಳವಡಿಸಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಎಂ 3 ಇವಿಎಂಗಳನ್ನು ಅಳವಡಿಸಲಾಗಿತ್ತು ಎಂದರು. ಯಾವುದೇ ಆಮಿಷಕ್ಕೆ ಒಳಗಾಗದೆ, ಭಯಕ್ಕೆ ಒಳಗಾಗದೆ ಮತಗಟ್ಟೆಗೆ ಬಂದು ಮತದಾನ ಮಾಡಬೇಕು, ಸೂಕ್ಷ್ಮ ಮತಗಟ್ಟೆಗಳಲ್ಲಿ ಅಗತ್ಯ ಭದ್ರತೆ, ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ ಆತಂಕವಿಲ್ಲದೇ ಬಂದು ಮತದಾನ ಮಾಡಿ ಎಂದು ಮನವಿ ಮಾಡಿದರು. ಚುನಾವಣೆಗೆ ಸಂಬಂಧಿಸಿದ ದೂರುಗಳಿಗೆ 1950ಕ್ಕೆ ಕರೆ ಮಾಡಬಹುದಾಗಿದೆ.