ಹೊಬರ್ಟ್ ಇಂಟರ್ ನ್ಯಾಷನಲ್ ಟೂರ್ನಿ ಗೆದ್ದ ಸಾನಿಯಾ ಮಿರ್ಜಾ

saniya mirza

ನವದೆಹಲಿ, ನ 18: ಭಾರತ ಹಿರಿಯ ಟೆನಿಸ್ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಇಂದಿಲ್ಲಿ ಮುಕ್ತಾಯವಾದ ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಉಕ್ರೈನ್ ನ ಜತೆಗಾರ್ತಿ ನದಿಯಾ ಕಿಚ್ನಾಕ್ ಅವರೊಂದಿಗೆ ಮಹಿಳೆಯರ ಡಬಲ್ಸ್ ವಿಬಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ 2017ರ ಬಳಿಕ ಆಡಿದ ಮೊದಲ ಟೂರ್ನಿಯಲ್ಲೇ ಸಾನಿಯಾ ಮಿರ್ಜಾ ಗೆಲುವಿನ ಆರಂಭ ಕಂಡಿದ್ದಾರೆ.

ಶನಿವಾರ ನಡೆದ ಮಹಿಳೆಯರ ಡಬಲ್ಸ್ ಫೈನಲ್ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಸಾನಿಯಾ ಮಿರ್ಜಾ ಹಾಗೂ ನದಿಯಾ ಕಿಚ್ನಾಕ್ ಜೋಡಿಯು 6-4, 6-4 ಅಂತರದಲ್ಲಿ ನೇರ ಸೆಟ್ ಗಳಿಂದ ಚೀನಾದ ಝಾಂಗ್ ಶುಯಿ ಮತ್ತು ಪೆಂಗ್ ಶುಯಿ ಜೋಡಿಯ ವಿರುದ್ಧ ಗೆದ್ದು ಚಾಂಪಿಯನ್ ಆಯಿತು.

ಸಾನಿಯಾ ಹಾಗೂ ನದಿಯಾ ಜೋಡಿ ಎದುರಾಳಿ ಚೀನಾ ಜೋಡಿಯನ್ನು ಪುಟಿದೇಳಲು ಅವಕಾಶ ನೀಡಲೇ ಇಲ್ಲ. ಸುಲಭವಾಗಿ ಅವರ ವಿರುದ್ಧ ಜಯ ಸಾಧಿಸಿದರು.  ಇದಕ್ಕೂ ಮುನ್ನ ಶುಕ್ರವಾರ ಸೆಮಿಫೈನಲ್ ಹಣಾಹಣಿಯಲ್ಲಿ ಮರಿಯಾ ಮತ್ತು ತಮರ ಜೋಡಿಯ ವಿರುದ್ಧ 7-6, 6-2 ಅಂತರದಲ್ಲಿ ಗೆಲುವು ಸಾಧಿಸಿತ್ತು.

 33ರ ಪ್ರಾಯದ ಸಾನಿಯಾ ಮಿರ್ಜಾ ಅವರು 2017ರ ಅಕ್ಟೋಬರ್ ನಲ್ಲಿ ಚೀನಾ ಓಪನ್ ನಲ್ಲಿ ಕೊನೆಯ ಬಾರಿ ಆಡಿದ್ದರು. ತಮ್ಮ ಪುತ್ರನ ಜನನದಿಂದಾಗಿ ದೀರ್ಘಕಾಲ ವಿಶ್ರಾಂತಿ ಪಡೆದಿದ್ದರು. ಇದಕ್ಕೂ ಮುನ್ನ 2019ರ ಡಿಸೆಂಬರ್ ನಲ್ಲಿ ಫೆಡ್ ಕಪ್ ಟೂರ್ನಿಯಲ್ಲಿ ಭಾರತದ ಪರ ಆಡಿದ್ದರು.