ಗಜೇಂದ್ರಗಡ 08 : ಆಪರೇಷನ್ ಸಿಂಧೂರ್ ಘೋಷಣೆಯಡಿ ಭಯೋತ್ಪಾದನೆಯ ವಿರುದ್ಧ ಸದೃಢ ನಿಲುವು ತೆಗೆದುಕೊಂಡು ಉಗ್ರಗಾಮಿಗಳ ನೆಲೆಗಳ ಮೇಲೆ ದಾಳಿಗೈದ ಭಾರತೀಯ ಸೇನೆಗೆ ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಅಭಿನಂದನೆ ಸಲ್ಲಿಸಿದರು. ಈ ಕುರಿತು ಪ್ರಕಟನೆ ನೀಡಿದ ಅವರು ಪಹಲ್ಗಾಮ್‌ನಲ್ಲಿ ಅಮಾಯಕ ನಾಗರಿಕರನ್ನು ಕ್ರೂರವಾಗಿ ಹತ್ಯೆಗೈದ ಈ ಘೋರ ಕೃತ್ಯಕ್ಕೆ ಭಾರತೀಯ ಸೇನೆ ಆಪರೇಷನ್ ಸಿಂಧೂರು ಮೂಲಕ ತಕ್ಕ ಪಾಠ ಕಲಿಸಲು ಮುಂದಾಗಿದೆ. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಿಒಕೆಯೊಳಗಿನ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ನಿಖರವಾದ ಮತ್ತು ಅನುಕರಣೀಯ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿತು.
ಈ ಕಾರ್ಯಾಚರಣೆಯು ನಮ್ಮ ಸಶಸ್ತ್ರ ಪಡೆಗಳ ಧೈರ್ಯ ಮತ್ತು ದಕ್ಷತೆಗೆ ಸಾಕ್ಷಿಯಾಗಿದೆ. ಅವರ ಶೌರ್ಯ ಮತ್ತು ಅಚಲ ಬದ್ಧತೆಯು ರಾಷ್ಟ್ರದ ಹೆಮ್ಮೆಯಾಗಿದೆ. ಧಾರ್ಮಿಕ ಭಯೋತ್ಪಾದನೆ, ಕೋಮುವಾದ ಮತ್ತು ನಮ್ಮ ರಾಷ್ಟ್ರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವ ವಿಭಜಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ. ತ್ಯಾಗ ಮತ್ತು ಪ್ರತಿರೋಧದ ಪರಂಪರೆಯೊಂದಿಗೆ, ನಮ್ಮ ದೇಶದ ಏಕತೆಯನ್ನು ಮುರಿಯುಲು ಪ್ರಯತ್ನಿಸುವ ಶಕ್ತಿಗಳಿಗೆ ತಕ್ಕ ಉತ್ತರ ನೀಡಿದೆ. ಪಹಲ್ಗಾಮ್ ದಾಳಿಯ ಹಿಂದಿನ ನಿಜವಾದ ಅಪರಾಧಿಗಳು ಮತ್ತು ಮಾಸ್ಟರ್ ಮೈಂಡ್‌ಗಳನ್ನು ಗುರುತಿಸಿ ಮಟ್ಟಹಾಕಬೇಕಿದೆ. ಪಹಲ್ಗಾಮ್‌ನಲ್ಲಿ ಅಮಾಯಕರ ಹತ್ಯಾಕಾಂಡಕ್ಕೆ ಕಾರಣರಾದವರನ್ನು ಹಸ್ತಾಂತರಿಸಲು ಪಾಕಿಸ್ತಾನದ ಮೇಲೆ ಒತ್ತಡವನ್ನು ಮುಂದುವರೆಸಬೇಕು ಮತ್ತು ಭಾರತ ಸರ್ಕಾರವು ಜನರ ಏಕತೆ ಮತ್ತು ದೇಶದ ಸಮಗ್ರತೆಯನ್ನು ರಕ್ಷಿಸುವುದನ್ನು ಖಚಿತಪಡಿಸಬೇಕು ಎಂದು ಅಂಜುಮಾನ್ ಇಸ್ಲಾಂ ಕಮೀಟಿ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ತಿಳಿಸಿದರು.