ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸಕರ್ಾರ ಚುರುಕುಗತಿ ಅನುಸರಿಸಿದೆ : ಡಿ.ವಿ.ಸದಾನಂದಗೌಡ

ಬೆಂಗಳೂರು, ಆ 8    ರಾಜ್ಯದಲ್ಲಿ  ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಚುರುಕುಗತಿಯಲ್ಲಿ ತನ್ನ ಜವಾಬ್ದಾರಿ ನಿರ್ವಹಿಸುತ್ತಿದೆ ಎಂದು ಬೆಂಗಳೂರು ಉತ್ತರ ಲೋಕಸಭಾಸಭಾ ಕ್ಷೇತ್ರದ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ   ಅತ್ಯಂತ ಮುತುವರ್ಜಿವಹಿಸಿ ಉತ್ತರ ಕರ್ನಾಟಕದಲ್ಲಿ ತಾವೇ ಮುಂದಾಗಿ ನಿಂತು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು,  ಜನ ಪ್ರತಿನಿಧಿಗಳನ್ನೊಳಗೊಂಡ ನಿರ್ವಹಣಾ ತಂಡ ರಚಿಸಿದ್ದಾರೆ. ಪ್ರವಾಹಪೀಡಿತರ ಜೊತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದ್ದು, ಯಾವುದೇ ಕಾರಣಕ್ಕೂ ಜನರು ಭೀತಿಪಡದಂತೆ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.  

ಕೊಡಗು, ಉತ್ತರ ಕನ್ನಡ , ದಕ್ಷಿಣ ಕನ್ನಡ ಮತ್ತು ಉಡುಪಿಯ ಜಿಲ್ಲಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಅಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದೇನೆ. ಈವರೆಗೂ ಪ್ರವಾಹದಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಅಗತ್ಯವಿರುವೆಡೆಗೆ ನಿರಾಶ್ರಿತರ ಕೇಂದ್ರ , ಪರಿಹಾರ ಕಾರ್ಯ ಕೈಗೊಳ್ಳಲು  ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ  ಸರ್ವಸನ್ನದ್ಧವಾಗಿರುವುದಾಗಿ ಜಿಲ್ಲಾಧಿಕಾರಿಗಳು ಹೇಳಿರುವುದಾಗಿ ಅವರು ತಿಳಿಸಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ  5 ಅಣೆಕಟ್ಟುಗಳಿಂದ ನೀರನ್ನು ಹೊರಬಿಟ್ಟಿರುವ ಕಾರಣ ಹೆಚ್ಚಿನ ಪ್ರವಾಹ ಪರಿಸ್ಥಿತಿ ಉಂಟಾಗಿದೆ.  ನಿರಾಶ್ರಿತರ ಕೇಂದ್ರದಲ್ಲಿ ಸುಮಾರು 2500  ಜನರಿದ್ದು, ಜಿಲ್ಲಾಡಳಿತ ಅಗತ್ಯ ಪರಿಹಾರ ಕ್ರಮ ತೆಗೆದುಕ್ಕೊಂಡಿದೆ.  ಜನ ಪ್ರತಿನಿಧಿಗಳಾದ  ರಘುಪತಿ ಭಟ್ , ಲಾಲ್ ಜಿ ಮೆಂಡನ್ , ಸಭಾಧ್ಯಕ್ಷ  ವಿಶ್ವೇಶ್ವರ ಹೆಗಡೆ ಕಾಗೇರಿ ಯವರ ನಿರಂತರ ಸಂಪರ್ಕದಲ್ಲಿ ತಾವು ಇರುವುದಾಗಿ ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ. 

ಶುಕ್ರವಾರ ಕೆಲ ಅತಿವೃಷ್ಟಿ ಪ್ರವಾಹ ಸ್ಥಳಗಳಿಗೆ ತಾವು ಭೇಟಿ ನೀಡಲಿದ್ದು, ರಾಜ್ಯದ ಜನತೆ ಪ್ರವಾಹ ಪೀಡಿತ ಪ್ರದೇಶದಲ್ಲಿರುವ ತಮ್ಮ ಸಂಬಂಧಿಕರು, ಮಿತ್ರರೊಂದಿಗೆ ಸಂಪರ್ಕದಲ್ಲಿರಬೇಕು. ಹಾಗೂ ತಮ್ಮ ಫೇಸ್ ಬುಕ್ ಗೆ ಪ್ರವಾಹ ಹಾನಿ ಕುರಿತು ಮಾಹಿತಿ ಹಂಚಿಕೊಂಡಲ್ಲಿ, ಅದನ್ನು ಜಿಲ್ಲಾಡಳಿತಕ್ಕೆ ರವಾನಿಸಿ ಸೂಕ್ತ ಪರಿಹಾರ ಕ್ರಮತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.