ಉತ್ತರ ಕರ್ನಾ ಟಕ ಭಾಗದಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವವರಿಗೆ ಸರ್ಕಾರದಿಂದ ನೆರವು: ಜಗದೀಶ ಶೆಟ್ಟರ

ಕೊಪ್ಪಳ: ಉತ್ತರ ಕರ್ನಾಟಕದ ಭಾಗಗಳಾದ ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವವರಿಗೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರು ಹಾಗೂ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ ಹೇಳಿದರು.

ಅವರು ಇಂದು (ಅ.21) ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜಿಲ್ಲೆಯ ಕೈಗಾರಿಕೋದ್ಯಮಿಗಳೊಂದಿಗೆ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಉತ್ತರ ಕನರ್ಾಟಕ ಭಾಗದ ಜಿಲ್ಲೆಗಳಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವುದರಿಂದ ಜನರಿಗೆ ಉದೋಗ ಅವಕಾಶಗಳು ಸಿಕ್ಕಂತೆ ಆಗುತ್ತವೆ. ಆದ್ದರಿಂದ ಅಧಿಕಾರಿಗಳು ಈ ಭಾಗದಲ್ಲಿ ಉದ್ದಿಮೆ ಸ್ಥಾಪಿಸುವವರಿಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡಬೇಕೆಂದರು.

ಭಾಗ್ಯನಗರದಲ್ಲಿ ಈ ಹಿಂದೆ ಕೂದಲು ಉದ್ದಿಮೆ ಬರಗಾಲದಲ್ಲೂ ಕೂಡ ಕೂದಲು ಇಂಜುತಾ ಕೆಲಸ ಮಾಡಲು ಜನರಿಗೆ ಉದೋಗ ನೀಡಿತ್ತು. ಅದು ಇಂದು ನಿಂತಿರುವುದರಿಂದ  ಆ ಕುಟುಂಬಗಳು  ಸಣ್ಣ ಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ಜೀವನವನ್ನು ನಡೆಸುತ್ತಾ ಇಂದು ಬೀದಿಪಾಲಾಗಿವೆ ಇದರ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದು ಕೂದಲು ಉದ್ದಿಮೆದಾರರು ಸಚಿವರನ್ನು ಹೇಳಿದಾಗ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.  

ಕೈಗಾರಿಕ ನೀತಿ ಹೊಸದಾಗಿ ಮಾಡುತ್ತಿದ್ದು, ತಮ್ಮ ಅಭಿಪ್ರಾಯಗಳು ಇದ್ದಲ್ಲಿ ತಿಳಿಸಿ ಎಂದು ಸಚಿವರು ಜಿಲ್ಲೆಯ ಉದ್ದಿಮೆದಾರರಿಗೆ ಹೇಳಿದಾಗ ಉದ್ದಿಮೆದಾರರು, ಉದ್ದಿಮೆಯ ಅಕ್ಕ ಪಕ್ಕದಲ್ಲಿ ಬೇರೆ ಯಾವುದೇ ಮನೆ, ಕಲ್ಯಾಣ ಮಟ್ಟಪ ಇತರೆ ಕಟ್ಟಡಗಳಿಗೆ ಅವಕಾಶ ನೀಡದಂತೆ ಉದ್ದಿಮೆಗೆ ವಿಶೇಷ ಜಮೀನನ್ನು ನಿಗದಿಪಡಿಸಬೇಕು. ಜಿ.ಎಸ್.ಟಿ ಕೌನ್ಸಿಲ್ ಬಲಿಷ್ಠಾವಾಗಿರಬೇಕು. ಮತ್ತು ತೆರಿಗೆ ನೀತಿಯಿಂದಾಗಿ ಉದ್ದಿಮೆಗಳು ನಿಂತುಹೊಗುತ್ತಿವೆ ಎಂದು ಉದ್ದಿಮೆದಾರರು ಸಚಿವರಿಗೆ ತಿಳಿಸಿದರು.  

ಈಗಾಗಲೇ ನಾನು ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿ ಉದ್ದಿಮೆಗೆ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸುವುದರ ಜೊತೆಗೆ ಆ ಜಿಲ್ಲೆಗಳ ಉದ್ದಿಮೆದಾರರ ಸಮಸ್ಯೆಗಳನ್ನು ಆಲಿಸುತ್ತಿದ್ದು, ಅವುಗಳ ಪರಿಹಾರಕ್ಕಾಗಿ ಅಧಿಕಾರಿಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಅದಾಲತ್ಗಳನ್ನು ನಡೆಸಿ ತಕ್ಷಣವೇ ಉದ್ದಿಮೆಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನ ಮಾಡುತ್ತಿದ್ದೆನೆ.  ಕೆಲವೊಂದು ಉದ್ದಿಮೆದಾರರು ರೈತರ ಭೂಮಿಯನ್ನು ಖರೀದಿಸಿದ ನಂತರ ಅವರ ಕುಟುಂಬದವರಿಗೆ ಉದ್ಯೋಗವನ್ನು ನೀಡಬೇಕು. ಈ ಕುರಿತು ಹೊಸ ಕೈಗಾರಿಕಾ ನೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.  

ಜಿಲ್ಲಾ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದರವರು ಮಾತನಾಡಿ, ಜಿಲ್ಲೆಯಲ್ಲಿ 7933 ಕೈಗಾರಿಕಾ ಘಟಕಗಳಿದ್ದು, ಇದರಲ್ಲಿ ಹನ್ನೊಂದು ಮಧ್ಯಮ, ಇಪ್ಪತ್ತೇಳು ದೊಡ್ಡ ಕೈಗಾರಿಕಾ ಘಟಕಗಳಿದ್ದು, ಇದರಲ್ಲಿ ಎರಡು ಘಟಕಗಳು ನಿಂತುಹೋಗಿವೆ. ಜಿಲ್ಲೆಯಲ್ಲಿ ಒಟ್ಟು 39800 ಜನರು ವಿವಿಧ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.  

ಸಭೆಯಲ್ಲಿ ಶಾಸಕರಾದ ಪರಣ್ಣ ಮುನವಳ್ಳಿ ಹಾಗೂ ಹಾಲಪ್ಪ ಆಚಾರ, ಉಪನಿಭಾಗಾಧಿಕಾರಿ ಸಿ.ಡಿ.ಗೀತಾ ಮತ್ತು ಉದ್ದಿಮೆದಾರರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.