ಸಾಹಿತಿ ಗೀತಾ ನಾಗಭೂಷಣ ನಿಧನ: ಗಣ್ಯರ ಕಂಬನಿ

ಬೆಂಗಳೂರು, ಜೂನ್ 29 : ಸಾಹಿತ್ಯದ  ಬಹುತೇಕ ಪ್ರಕಾರಗಳಲ್ಲಿ ಕೆಲಸ ಮಾಡಿದ್ದ ಗೀತಾ ನಾಗಭೂಷಣ ಅವರು, ಕಥೆ ಮತ್ತು ಕಾದಂಬರಿ  ಕ್ಷೇತ್ರದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ಕನ್ನಡ ಸಾಹಿತ್ಯದ  ಪ್ರಮುಖ ಮಹಿಳಾ ದನಿಯೊಂದನ್ನು ಕಳೆದುಕೊಂಡಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಹಿರಿಯ ಬರಹಗಾರ್ತಿ ಗೀತಾ ನಾಗಭೂಷಣ ಅವರ ನಿಧನ ತೀವ್ರ ‌ದುಃಖ ತಂದಿದೆ.  ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ, ಅತ್ತಿಮಬ್ಬೆ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದ್ದರು ಎಂದು ಶ್ರೀರಾಮುಲು ಟ್ವೀಟ್‌ ಮಾಡಿದ್ದಾರೆ.ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, 

ಕನ್ನಡದ ಹಿರಿಯ ಸಾಹಿತಿ, ಖ್ಯಾತ ಕಾದಂಬರಿಗಾರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ನಾಡೋಜ ಗೌರವ ಪಡೆದ ರಾಜ್ಯದ ಮೊದಲ ಮಹಿಳಾ ಸಾಹಿತಿ ಗೀತಾ ನಾಗಭೂಷಣ್ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಕುಟುಂಬ ಸದಸ್ಯರಿಗೆ ಮತ್ತು ಅಸಂಖ್ಯಾತ ಅಭಿಮಾನಗಳಿಗೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಂತಾಪ ಸೂಚಿಸಿ, ಹಿರಿಯ ಸಾಹಿತಿ ನಾಡೋಜ ಗೀತಾ ನಾಗಭೂಷಣ್ ಅವರ ನಿಧನದ ಸುದ್ದಿ ಕೇಳಿ ಮನಸಿಗೆ ಆಘಾತ ತಂದಿದೆ.   ಕುಟುಂಬ ಹಾಗೂ ಹಿತೈಷಿ ವರ್ಗಕ್ಕೆ  ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.  ಓಂ ಶಾಂತಿ ಎಂದು ಟ್ವಿಟ್ ಮಾಡಿದ್ದಾರೆ.ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, 

ತಮ್ಮ ಪ್ರಗತಿಪರ ಕಾದಂಬರಿ ಮತ್ತು ಕಥೆಗಳ ಮೂಲಕ ಕನ್ನಡಿಗರ ಮನಸಲ್ಲಿ ಸ್ಥಾನ ಪಡೆದಿದ್ದ ಹಿರಿಯ ಕಾದಂಬರಿಗಾರ್ತಿ ಗೀತಾ ನಾಗಭೂಷಣರವರು ನಮನ್ನಗಲಿದ್ದಾರೆ.  ಗೀತಾ ನಾಗಭೂಷಣರು ಕನ್ನಡಕ್ಕೆ ಮೊಟ್ಟಮೊದಲ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ತಂದು ಕೊಟ್ಟವರಾಗಿದ್ದರು.  ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.