ನವದೆಹಲಿ, ಜ.22 : ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವೃದ್ಧಿಮನ್ ಸಹಾ ಅವರಿಗೆ ದೆಹಲಿ ವಿರುದ್ಧ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ರಣಜಿ ಟೂರ್ನಿಯ ಪಂದ್ಯದಲ್ಲಿ ಆಡದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ತಿಳಿಸಿದೆ.
ಕಳೆದ ವರ್ಷ ಬಾಂಗ್ಲಾ ವಿರುದ್ಧ ನಡೆದಿದ್ದ ಹಗಲು ರಾತ್ರಿ ಟೆಸ್ಟ್ ವೇಳೆ ಸಹಾ ಅವರು ಗಾಯಕ್ಕೆ ತುತ್ತಾಗಿದ್ದರು. ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಪಶ್ಚಿಮ ಬಂಗಾಳ ತಂಡ ಮಂಗಳವಾರ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 303 ರನ್ ಗಳ ಜಯ ಸಾಧಿಸಿತ್ತು.
“ಭಾನುವಾರದಿಂದ ಆರಂಭವಾಗಲಿರುವ ರಣಜಿ ಪಂದ್ಯಕ್ಕೆ ಸಹಾ ಅಲಭ್ಯರಾಗಲಿದ್ದಾರೆ. ನನಗೆ ಅನಿಸಿದಂತೆ ಬಿಸಿಸಿಐ ಈ ಪಂದ್ಯ ಆಡದಿರಲು ಸೂಚಿಸಿದೆ. ಸಹಾ ಅವರಿಗೆ ಇದು ಉತ್ತಮ ಅವಕಾಶ. ಇವರ ಅನುಪಸ್ಥಿತಿ ತಂಡಕ್ಕೆ ಕಾಡುವುದಿಲ್ಲ” ಎಂದು ಬಂಗಾಳ ಕೋಚ್ ಅರುಣ್ ಲಾಲ್ ತಿಳಿಸಿದ್ದಾರೆ.
ಭಾರತ, ನ್ಯೂಜಿಲೆಂಡ್ ಪ್ರವಾಸದಲ್ಲಿ ಎರಡು ಟೆಸ್ಟ್ ಪಂದ್ಯ ಆಡಲಿದೆ. ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಗಾಯಕ್ಕೆ ತುತ್ತಾಗಿದ್ದರಿಂದ ನ್ಯೂಜಿಲೆಂಡ್ ಪ್ರವಾಸಕ್ಕೆ ಅಲಭ್ಯರಾಗಿದ್ದರು.