ದ್ವಿಚಕ್ರ ವಾಹನಗಳಲ್ಲಿ ಮಕ್ಕಳಿಗೆ ಸುರಕ್ಷತಾ ಬೆಲ್ಟ್‌: ಸಾರಿಗೆ ಇಲಾಖೆಯಿಂದ ವಿಶೇಷ ಜಾಗೃತಿ

Safety belts for children on two-wheelers: Special awareness from the Transport Department

ದ್ವಿಚಕ್ರ ವಾಹನಗಳಲ್ಲಿ ಮಕ್ಕಳಿಗೆ ಸುರಕ್ಷತಾ ಬೆಲ್ಟ್‌: ಸಾರಿಗೆ ಇಲಾಖೆಯಿಂದ ವಿಶೇಷ ಜಾಗೃತಿ 

ಕೊಪ್ಪಳ  13:  ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವ ಸಂದರ್ಭದಲ್ಲಿ ಸುರಕ್ಷತಾ ಬೆಲ್ಟ್‌ (ಸೇಫ್ಟಿ ಹಾರ್ನೆಸ್ ಬೆಲ್ಟ್‌) ಧರಿಸುವ ಕುರಿತಂತೆ ಕೊಪ್ಪಳ ಪ್ರಾದೇಶಿಕ ಸಾರಿಗೆ ಇಲಾಖೆಯು ಗುರುವಾರ ಕೊಪ್ಪಳ ನಗರದಲ್ಲಿ ವಿಶೇಷ ಜಾಗೃತಿ ಮೂಡಿಸಿತು. ಕೊಪ್ಪಳ ನಗರದ ಎಸ್‌.ಎಫ್‌.ಎಸ್ ಆಂಗ್ಲ ಮಾಧ್ಯಮ ಪ್ರೌಡ ಶಾಲೆ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಡ ಶಾಲೆಗಳಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ಮಕ್ಕಳ ಪೋಷಕರು ಮತ್ತು ಪಾಲಕರಿಗೆ ಸುರಕ್ಷತಾ ಬೆಲ್ಟ್‌ ಧರಿಸುವ ಬಗ್ಗೆ ಪ್ರಾಯೋಗಿಕವಾಗಿ ಬೇಲ್ಟ್‌ ಹಾಕುವ ಮೂಲಕ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ್ ಅವರು ಮಾತನಾಡಿ, ನಾಲ್ಕು ವರ್ಷದ ಒಳಗಿನ ಮಕ್ಕಳನ್ನ ಶಾಲೆಗಳಿಗೆ ಹಾಗೂ ಇತರೆ ಯಾವುದೇ ಕಾರಣಕ್ಕಾಗಿ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮಕ್ಕಳು ನಿದ್ರೆಗೆ ಜಾರಿ ಅನಾಹುತ ಸಂಭಂವಿಸುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಪೋಷಕರು ಮತ್ತು ಪಾಲಕರು ತಮ್ಮ ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಸುರಕ್ಷತಾ ಬೆಲ್ಟ್‌ (ಸೇಫ್ಟಿ ಹಾರ್ನೆಸ್ ಬೆಲ್ಟ್‌) ಧರಿಸುವುದು ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಹಾಗೂ ಪ್ರಾದೇಶಿಕ ಸಾರಿಗೆ ಆಯುಕ್ತರ ನಿರ್ದೇಶನದಂತೆ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳ ಸುರಕ್ಷತಾ ಬೆಲ್ಟ್‌ಗಳು ಶೋರೂಂಗಳಲ್ಲಿ ದೊರೆಯುತ್ತವೆ. 4 ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ದ್ವಿಚಕ್ರ ವಾಹನ ಸವಾರರು, ಈ ಸುರಕ್ಷತಾ ಬೆಲ್ಟ್‌ಗಳನ್ನು ಖರೀದಿಸಿ ಮಕ್ಕಳ ರಕ್ಷಣೆಗೆ ಮುಂದಾಗಬೇಕು. ಈ ಕುರಿತು ಮುಂದಿನ ದಿನಮಾನಗಳಲ್ಲಿ ಕಡ್ಡಾಯ ನಿಯಮಗಳು ಜಾರಿಯಾಗಲಿವೆ ಎಂದು ಹೇಳಿದರು. ದ್ವಿಚಕ್ರ ವಾಹನಗಳ ಸುರಕ್ಷತೆ: ಈ ಕಾರ್ಯಕ್ರಮದಲ್ಲಿ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವಾಗ ಸುರಕ್ಷತಾ ಬೆಲ್ಟ್‌ (ಸೇಫ್ಟಿ ಹಾರ್ನೆಸ್ ಬೆಲ್ಟ್‌) ಬಳಸುವುದು. ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕರೆದೊಯ್ಯುವಾಗ ಗಂಟೆಗೆ 40 ಕಿ.ಮೀ. ವೇಗ ಮೀರಬಾರದು. ಮಕ್ಕಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವಂತೆ ವಾಹನ ಸವಾರರಿಗೆ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾದೇಸಿಕ ಸಾರಿಗೆ ಇಲಾಖೆಯ ಮೊಟಾರು ವಾಹನ ನೀರೀಕ್ಷಕ ವಿಜಯೇಂದ್ರ ದವಳಗಿ, ಅಧೀಕ್ಷಕ ನರಸಪ್ಪ, ಸಿಬ್ಬಂದಿಗಳಾದ ಸಿದ್ದೇಶ ಕುರಟ್ಟಿ, ರಂಜಿತ ಸಹಜಾನಂದ, ಜಯಶ್ರೀ ಶಿರೂರು, ಸಿದ್ರಾಮಪ್ಪ ಕಗ್ಗೋಡ, ಶಕುಂತಲಾ ಕಡಕೋಳ ಹಾಗೂ ತಾಂತ್ರಿಕ ಸಿಬ್ಬಂದಿಗಳು, ಸಹಾಯಕರು ಸೇರಿದಂತೆ ಶಾಲಾ ಶಿಕ್ಷಕರು, ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು.