ಸಚಿನ್ ಹೆಚ್ಚಿನ ದಾಖಲೆ ಮುರಿಯುವ ಸಾಮಥ್ರ್ಯ ಕೊಹ್ಲಿಗಿದೆ: ಸೆಹ್ವಾಗ್

ನವದೆಹಲಿ, ಆ 22     ಭಾರತ ಕ್ರಿಕೆಟ್ನಲ್ಲಿ ಒಂದು ಕಾಲದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಸಾಲಿನಲ್ಲಿ ಇದೀಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಗುತ್ತಿದ್ದಾರೆ. ಸಚಿನ್ ಅವರ ಹಲವು ದಾಖಲೆಗಳನ್ನು ಈಗಾಗಲೇ ಕಿಂಗ್ ಕೊಹ್ಲಿ ಮುರಿದಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ ಅವರು ಈಗಿನ ತಲೆಮಾರಿನಲ್ಲಿ ವಿರಾಟ್ ಕೊಹ್ಲಿ ಒಬ್ಬ ಪ್ರಬುದ್ಧ ಬ್ಯಾಟ್ಸ್ಮನ್. ಅವರು ದೀಘರ್ಾವಧಿ ಸ್ಥಿರ ಬ್ಯಾಟಿಂಗ್ ಮಾಡುವ ಆಟಗಾರರಾಗಿದ್ದು, ಸಚಿನ್ ತೆಂಡೂಲ್ಕರ್ ಅವರ ಇನ್ನೂ ಹಲವು ದಾಖಲೆಗಳನ್ನು ಟೀಮ್ ಇಂಡಿಯಾ ನಾಯಕ ಮುರಿಯಲಿದ್ದಾರೆಂದು ವೀರು ಭವಿಷ್ಯ ನುಡಿದ್ದಾರೆ. 

"ವಿರಾಟ್ ಕೊಹ್ಲಿ ಅವರು ಸಿಡಿಸುವ ಶತಕ ಹಾಗೂ ಅವರು ರನ್ ಗಳಿಸುವ ಹಾದಿ ಗಮನಿಸಿದಾಗ ಅವರೊಬ್ಬ ಅದ್ಭುತ ಬ್ಯಾಟ್ಸ್ಮನ್ ಎಂಬುದರಲ್ಲಿ ಅನುಮಾನವೇ ಇಲ್ಲ. ಕ್ರಿಕೆಟ್ ದಿಗ್ಗಜ ತೆಂಡೂಲ್ಕರ್ ಅವರ ಹೆಚ್ಚಿನ ದಾಖಲೆಗಳನ್ನು ಕೊಹ್ಲಿ ಮುರಿಯಲಿದ್ದಾರೆಂದು ನನಗೆ ಸ್ಪಷ್ಟತೆ ಇದೆ ಎಂದರು. 

ಇತ್ತೀಚೆಗೆ ಮುಕ್ತಾಯವಾಗಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸತತ ಎರಡು ಶತಕ ಬಾರಿಸಿದ್ದರು. ಆ ಮೂಲಕ ಅವರು ಏಕದಿನ ಮಾದರಿಯ ವೃತ್ತಿ ಜೀವನದಲ್ಲಿ 43ನೇ ಶತಕ ಪೂರೈಸಿದ್ದರು. ಇನ್ನೂ ಏಳು ಶತಕ ಸಿಡಿಸಿದ್ದೇ ಆದಲ್ಲಿ ವಿರಾಟ್ ಅವರು 49 ಶತಕ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಲ್ಲಿದ್ದಾರೆ. 

ಸಚಿನ್ ತೆಂಡೂಲ್ಕರ್ ಅವರು 463 ಪಂದ್ಯಗಳಿಂದ (452 ಇನಿಂಗ್ಸ್) 44.83 ಸರಾಸರಿಯಲ್ಲಿ 18,426 ರನ್ ಸಿಡಿಸಿದ್ದಾರೆ.  ಆದರೆ, ಕೊಹ್ಲಿ 239 (230 ಇನಿಂಗ್ಸ್) ಪಂದ್ಯಗಳಿಂದ 60.31 ಸರಾಸರಿಯಲ್ಲಿ 11,520 ರನ್ ಸಿಡಿಸಿದ್ದಾರೆ.  

ಟೆಸ್ಟ್ ಕ್ರಿಕೆಟ್ನಲ್ಲಿ 25 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, 51 ಶತಕ ಸಿಡಿಸಿರುವ ಸಚಿನ್ ಅವರ ಅರ್ಧ ಹಾದಿಯಲ್ಲಿದ್ದಾರೆ.  

"ಸಚಿನ್ ತೆಂಡೂಲ್ಕರ್ ಅವರು 200 ಟೆಸ್ಟ್ ಪಂದ್ಯಗಳಾಡಿರುವ ಒಂದು ದಾಖಲೆ ಮಾತ್ರ ಯಾರೂ ಮುರಿಯಲು ಸಾಧ್ಯವೇ ಇಲ್ಲ. ವಿಶ್ವದ ಯಾವೊಬ್ಬ ಆಟಗಾರ 200 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳು ಆಡಲು ಸಾಧ್ಯವಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.