ಬೆಂಗಳೂರು, ಜೂ 29: ನಾಲ್ಕನೇ ದಿನವಾದ ಇಂದು ನಡೆದ ಎಸ್ಸೆಸ್ಸೆಲ್ಸಿ ವಿಜ್ಞಾನ, ರಾಜ್ಯಶಾಸ್ತ್ರ, ಸಂಗೀತ ಪರೀಕ್ಷೆಗೆಗಳಿಗೆ ಮತ್ತಿತರ ಪರೀಕ್ಷೆಗಳು ಸಾಮಾಜಿಕ ಸುರಕ್ಷಿತ ವಾತಾವರಣದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.ಪರೀಕ್ಷೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ವಿಜ್ಞಾನ, ರಾಜ್ಯಶಾಸ್ತ್ರ ಹಾಗೂ ಸಂಗೀತ ಪರೀಕ್ಷೆಗೆಗಳಿಗೆ ನೊಂದಾಯಿತ 7,91,102 ವಿದ್ಯಾರ್ಥಿಗಳ (ವಿಜ್ಞಾನ-7,90,681, ರಾಜ್ಯಶಾಸ್ತ್ರ - 419, ಸಂಗೀತ- 02) ಪೈಕಿ 7,74,729 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು,ಒಟ್ಟಾರೆ ಶೇ. 97.93ರಷ್ಟು ಇಂದು ಹಾಜರಾತಿ ಇದ್ದು, 16,373 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಕಳೆದ 2018-19ನೇ ಸಾಲಿಗೆ 7,79,993 ವಿದ್ಯಾರ್ಥಿಗಳ ಪೈಕಿ 7,69,778 ವಿದ್ಯಾರ್ಥಿಗಳು ಹಾಜರಾಗಿದ್ದು, 10,215 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶೇ. 98.69 ಹಾಜರಾತಿ ಇತ್ತು. ರಾಜ್ಯಶಾಸ್ತ್ರ- 4 ಗೈರು ಹಾಜರಿ, ಸಂಗೀತ- ಇಬ್ಬರೂ ಹಾಜರಾಗಿದ್ದಾರೆ ಎಂದು ಅವರು ವಿವರಿಸಿದರು.
ಮೊದಲ ಬಾರಿಗೆ 7,45,033 ಶಾಲಾ ವಿದ್ಯಾರ್ಥಿಗಳು ಹಾಗೂ 20,976 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಂಟೈನ್‍ಮೆಂಟ್ ಪ್ರದೇಶಗಳ 2942 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 491ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ 03 ವಿದ್ಯಾರ್ಥಿಗಳನ್ನು (ಧಾರವಾಡ-2, ರಾಯಚೂರು-1) ಡಿಬಾರ್ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1442ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 645 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 53 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 592 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 12,644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿ ಸಿದ್ದು, 12,539 ವಿದ್ಯಾರ್ಥಿಗಳು ಹಾಜರಾಗಿದ್ದರೆ, 105 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆಂದು ಅವರು ತಿಳಿಸಿದರು.
ಹೋಂ ಕ್ವಾರಂಟೈನಲ್ಲಿ ಹಾಗೂ ಕೋವಿಡ್ ಪಾಸಿಟೀವ್ ಎಂದು ಗುರುತಿಸಲ್ಪಟ್ಟ ವಿದ್ಯಾರ್ಥಿಗಳಿಗೆ ಈಗಿನ ಪರೀಕ್ಷೆಯನ್ನು ಬರೆಯುವುದರಿಂದ ವಿನಾಯ್ತಿ ನೀಡಲಾಗಿದೆ. ಈ ಎಲ್ಲರಿಗೂ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು. ಪರೀಕ್ಷಾ ಕೇಂದ್ರಕ್ಕೆ 3215 ಬಸ್ ಹಾಗೂ ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಪಡೆದು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ಸುರೇಶ್ ಕುಮಾರ್ ವಿವರಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಭೇಟಿ: ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಸೇರಿದ 14 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಎಲ್ಲ ವ್ಯವಸ್ಥೆಗಳನ್ನು ಗಮನಿಸಿದ್ದೇನೆ.ಎಲ್ಲ ಕಡೆ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಲಾಗಿದೆ.ಮಕ್ಕಳು ನೆಮ್ಮದಿ ಮತ್ತು ಆಹ್ಲಾದಕರ ವಾತಾವರಣದಲ್ಲಿ ಪರೀಕ್ಷೆ ಬರೆಯುತ್ತಿದ್ದುದು ಕಂಡುಬಂತು ಎಂದು ಅವರು ಹೇಳಿದರು
ಸಚಿವ ಸಹೋದ್ಯೋಗಿಗಳೊಂದಿಗೆ ಚರ್ಚೆ : ಇಂದು ನನ್ನ ಹಲವಾರು ಸಂಪುಟ ಸಹೋದ್ಯೋಗಿ ಗಳೊಂದಿಗೆ ಪರೀಕ್ಷೆಯ ಬಗ್ಗೆ ಚರ್ಚಿಸಿದ್ದೇನೆ. ಜಗದೀಶ್ ಶೆಟ್ಟರ್, ಬಸವರಾಜ ಎಸ್. ಬೊಮ್ಮಾಯಿ, ಸಿ.ಟಿ. ರವಿ, ಜೆ.ಸಿ. ಮಾಧುಸ್ವಾಮಿ, ವಿ. ಸೋಮಣ್ಣ, ಸಿ.ಸಿ. ಪಾಟೀಲ, ಎಸ್.ಟಿ. ಸೋಮಶೇಖರ್ ಸೇರಿದಂತೆ ಎಲ್ಲ ಸಚಿವರು ಶಿಕ್ಷಣ ಇಲಾಖೆಯ ಈ ಕ್ರಮದ ಕುರಿತಂತೆ ವಿಶೇಷವಾಗಿ ಸರ್ಕಾರದ ಪರಿಶ್ರಮದ ಬಗ್ಗೆ ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲಾಡಳಿತಗಳ ಬಗ್ಗೆ ಮೆಚ್ಚುಗೆ: ಎಸ್ಎಸ್ಎಲ್ಸಿ ಪರೀಕ್ಷೆ ಸಿದ್ಧತೆ ಕುರಿತಂತೆ ನಾನು ಈಗ್ಗೆ ಐದು ತಿಂಗಳಿನಿಂದಲೂ ನಾನು ಎಲ್ಲ ಜಿಲ್ಲಾಡಳಿತಗಳೊಂದಿಗೆ ಈ ಸಂಬಂಧದಲ್ಲಿ ಸಂಪರ್ಕದಲ್ಲಿದ್ದೇನೆ. ಹಲವಾರು ಬಾರಿ ಅವರೊಂದಿಗೆ ಸಭೆ ನಡೆಸಿದ್ದೇನೆ. ಕರೋನಾ ಮೊದಲು ಮತ್ತು ನಂತರದ ಸಾಮಾಜಿಕ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವ ಕುರಿತಂತೆ ಜಿಲ್ಲಾಡಳಿತಗಳು ಕೈಗೊಂಡ ಕ್ರಮಗಳು, ವಿದ್ಯಾರ್ಥಿಗಳ ಪ್ರತಿಸ್ಪಂದನೆ ಇಡೀ ದೇಶಕ್ಕೇ ಮಾದರಿಯಾಗುವಂತೆ ಉಪಕ್ರಮಗಳಾಗಿವೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಅವರು ಹೇಳಿದರು. ಆರೋಗ್ಯ ಇಲಾಖೆಯ ಸ್ಪಷ್ಟ ಮಾರ್ಗದರ್ಶನ : ಈಗಾಗಲೇ ರಾಜ್ಯಾದ್ಯಂತ ಕೋವಿಡ್ ಸೋಂಕು ಹೊಂದಿದ ವಿದ್ಯಾರ್ಥಿಗಳಿಗೆ ಪ್ರಸ್ತುತ ನಡೆಯುತ್ತಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಬರೆಯಲು ಇವರೆಲ್ಲರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಯಾವುದೇ ರೋಗ ಲಕ್ಷಣಗಳಲ್ಲಿದ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆ ನಡೆಸುವ ರ್ಯಾಂಡಮ್ ಟೆಸ್ಟ್ ನಲ್ಲಿ ಕೋವಿಡ್ ಸೋಂಕು ಹರಡಿರುವುದು ದೃಢಪಟ್ಟಲ್ಲಿ ಅಂತಹ ವಿದ್ಯಾರ್ಥಿಯ ಸುತ್ತಮುತ್ತ ಕುಳಿತು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಬಾಕಿ ಉಳಿದ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಬಹುದೇ ಎಂಬ ಬಗ್ಗೆ ಆರೋಗ್ಯ ಇಲಾಖೆಯ ಸ್ಪಷ್ಟೀಕರಣ ಕೋರಲಾಗಿತ್ತು. ಆರೋಗ್ಯ ಇಲಾಖೆ ಕೆಳಕಂಡಂತೆ ಸ್ಪಷ್ಟೀಕರಣ ನೀಡಿದೆ ಎಂದು ಸಚಿವರು ತಿಳಿಸಿದರು.
ಈ ಹಿನ್ನೆಲೆಯಲ್ಲಿ, ಪರೀಕ್ಷಾ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗೂ ಕೋವಿಡ್ 19 ಸೋಂಕು ದೃಢಪಟ್ಟಿದ್ದಲ್ಲಿ ಆರೋಗ್ಯ ಇಲಾಖೆಯ ಸಲಹೆಯ ಮೇರೆಗೆ ಆತ/ಆಕೆಯ ಜೊತೆ ಪರೀಕ್ಷೆ ಬರೆದಿದ್ದ ಇತರೆ ವಿದ್ಯಾರ್ಥಿಗಳಿಗೆ ಎಂದಿನಂತೆ ಸುರಕ್ಷಿತವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ಡೆಸ್ಕ್ ನಲ್ಲಿ ಒಬ್ಬ ವಿದ್ಯಾರ್ಥಿ ಹಾಗೂ ಡೆಸ್ಕ್ ಗಳ ನಡುವೆ ಆರು ಅಡಿ ಅಂತರವಿರುವಂತೆ ಕ್ರಮ ವಹಿಸಿ ಅಂತಹ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು. ಇಂದಿನ ಪರೀಕ್ಷೆಯ ಸಂದರ್ಭದಲ್ಲಿ ನಡೆದ ಕೆಳಕಂಡ ಕೆಲ ಪ್ರಮುಖ ಸಂಗತಿಗಳನ್ನು ಸಚಿವ ಸುರೇಶ್ ಕುಮಾರ್ ವಿವರಿಸಿದರು ; ಶಿರಸಿ ತಾಲೂಕಿನ ದೇವನಹಳ್ಳಿಯಲ್ಲಿ ವಿದ್ಯಾರ್ಥಿಯೊಬ್ಬನ ತಾಯಿ ದುರದೃಷ್ಟವಶಾತ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಆತನ ಮನೆಗೆ ಭೇಟಿ ನೀಡಿ ನಮ್ಮ ಶಿಕ್ಷಕರು ಆತನನ್ನು ಮನವೊಲಿಸಿ ಶಿರಸಿಯ ಮಾರಿಕಾಂಬ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗುವಂತೆ ಮಾಡಿದ್ದಾರೆ. ವಿದ್ಯಾರ್ಥಿಯ ಸ್ಥೈರ್ಯಕ್ಕೆ ನನ್ನ ಅಭಿನಂದನೆಗಳು ಮತ್ತು ಅವನ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ. ಕಾರವಾರ ನಗರದ ಹಿಂದು ಪ್ರೌಢಶಾಲೆ ವಿದ್ಯಾರ್ಥಿ ನಿತಿನ್ ಕಾರವಾರ ತಂದೆ ಇತ್ತೀಚಿಗೆ ನಿಧನರಾಗಿದ್ದು, ಇಂದು ತಂದೆಯವರ 12ನೇ ದಿನದ ಉತ್ತರಕ್ರಿಯೆಯ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಆತ ವಿನಂತಿಸಿದ್ದ. ಆದರೆ ನಮ್ಮ ಶಿಕ್ಷಕರು ಇಂದು ಬೆಳಗ್ಗೆಯೇ ಆತನ ಮನೆಗೆ ತೆರಳಿ ಉತ್ತರಕ್ರಿಯೆಯ ವಿಧಿಗಳನ್ನು ಬೇಗನೆ ಪೂರೈಸುವಂತೆ ಮಾಡಿ ಪರೀಕ್ಷೆಗೆ ಕರೆತಂದರು. ವಿದ್ಯಾರ್ಥಿ ಸುರಕ್ಷಿತವಾಗಿ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಬರೆದಿದ್ದಾನೆ ಎಂದು ಹೇಳಿದರು.
ಬೆಳಗಾವಿ ನಗರದಲ್ಲಿ ಟಿಳಕವಾಡಿ ಡಿಪಿ ಶಾಲೆಯ ಕೇಂದ್ರದಲ್ಲಿ 320 ಖಾಸಗಿ ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಇಂದಿನಿಂದ ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದಿಂದ ನಿಗದಿತ ಅವಧಿಗೆ ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗಲು ಅವಶ್ಯ ಸಂಖ್ಯೆಯ ಬಸ್ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ ಶಿರಸಿಯ ಮುಂಡಗೋಡದ ಚಿಪಗೇರಿ ಗ್ರಾಮದಿಂದ ಪ್ರತಿದಿನ ಪರೀಕ್ಷೆಗೆ 19 ಮಕ್ಕಳು ಸುಮಾರು 32 ಕಿ.ಮೀ.ದೂರದ ಕಾತೂರಿನ ಸರ್ಕಾರಿ ಪ್ರೌಢಶಾಲಾ ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಕರ ದ್ವಿಚಕ್ರ ವಾಹನಗಳಲ್ಲಿ ಬಂದು ಹೋಗುತ್ತಿದ್ದರು. ಇಂದಿನಿಂದ ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಿ ಅನುಕೂಲ ಮಾಡಿಕೊಡಲಾಗಿದೆ.
ಶಿರಸಿ ತಾಲೂಕಿನ ದನಗನಹಳ್ಳಿಯ ಕಾವ್ಯ ಕುಂಬಾರ ಎಂಬ ವಿದ್ಯಾರ್ಥಿನಿಯ ಪೋಷಕರು ಕೋವಿಡ್ ಪ್ರಸರಣದ ಹಿನ್ನೆಲೆಯಲ್ಲಿ ತಮ್ಮ ಮಗಳನ್ನು ಪರೀಕ್ಷೆಗೆ ಕಳುಹಿಸಲು ಹಿಂದೇಟು ಹಾಕಿದ್ದು, ಹಿಂದಿನ ಎರಡು ಪತ್ರಿಕೆಗಳ ಪರೀಕ್ಷೆಗೆ ಹಾಜರಾಗಿರಲಿಲ್ಲ. ಇದು ಗೊತ್ತಾಗಿ ಇಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ, ಶಾಲಾ ಮುಖ್ಯೋಪಾದ್ಯಾಯರು ಸೇರಿದಂತೆ ಅಧಿಕಾರಿಗಳು ಪೋಷಕರ ಮನವೊಲಿಸಿ ಆಕೆಯನ್ನು ಇಂದು ಶಿರಸಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಿದ್ದು, ವಿದ್ಯಾರ್ಥಿನಿ ಖುಷಿಯಿಂದ ಪರೀಕ್ಷೆ ಬರೆದಿರುವುದು ಕಂಡು ಬಂತು. ಅದೇ ರೀತಿ ಧಾರವಾಡದ ಕೆಎಂಕೆ ಪ್ರೌಢಶಾಲಾ ವಿದ್ಯಾರ್ಥಿನಿ ತಬಸ್ಸು, ಧಾರವಾಡ ತಾಲೂಕಿನ ಕೋಟೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ರೇವಣ್ಣ ಹರಿಜನ, ಧಾರವಾಡ ತಾಲೂಕಿನ ಕಡಬಗಟ್ಟಿಯ ಮಿಲತ್ ಪ್ರೌಢಶಲಾ ವಿದ್ಯಾರ್ಥಿನಿ ವಿದ್ಯಾವತಿ ಇವರುಗಳ ಪೋಷಕರನ್ನು ನಮ್ಮ ಶಿಕ್ಷಕರು ಮನವೊಲಿಸಿ ಇಂದು ಧೈರ್ಯವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದ್ದಾರೆ. ಈ ಮಕ್ಕಳು ಕಳೆದ ಎರಡು ಪತ್ರಿಕೆಗಳ ಪರೀಕ್ಷೆಗೆ ಬಂದಿರಲಿಲ್ಲ.
ಹಾಸನ ಜಿಲ್ಲೆಯ ಅರಸೀಕೆರೆಯ ಸೇಂಟ್ ಮೆರಿಸ್ ಹಾಗೂ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜುಗಳಿಗೆ ಸೇರಿದ ಇಬ್ಬರು ವಿದ್ಯಾರ್ಥಿಗಳ ಪೋಷಕರು ನಿನ್ನೆ ದಿನ ಕೋವಿಡ್ ಸೋಂಕಿಗೆ ಒಳಗಾದ ಪ್ರಕರಣ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಮಕ್ಕಳನ್ನು ಇಂದು ನಡೆಯುವ ಪರೀಕ್ಷೆಗೆ ನಿರಾಕರಿಸಿ ಮುಂದಿನ ಪೂರಕ ಪರೀಕ್ಷೆ ಬರೆಯುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಇಬ್ಬರೂ ವಿದ್ಯಾರ್ಥಿಗಳು ಸೋಂಕಿನ ಯಾವುದೇ ಲಕ್ಷಣವನ್ನು ತೋರದೇ ಇದ್ದರೂ ಸಹ ಅವರುಗಳ ತಪಾಸಣೆಗೆ ಸಹ ಸೂಚಿಸಲಾಗಿದೆ. ಮೊನ್ನೆ ದಿನ ಈ ವಿದ್ಯಾರ್ಥಿಗಳ ಜೊತೆ ಕೊಠಡಿಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಇತರೆ ವಿದ್ಯಾರ್ಥಿಗಳನ್ನು ಇಂದು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯುವ ವಾತಾವರಣ ಕಲ್ಪಿಸಲಾಗಿದೆ.
ಬಾಗಲಕೋಟೆ ನವನಗರದ ಪರೀಕ್ಷಾ ಕೇಂದ್ರದಲ್ಲಿ ಮೊನ್ನೆಯ ಗಣಿತ ಪರೀಕ್ಷೆ ದಿನ ಕೊಠಡಿ ಮೇಲ್ವಿಚಾರಕಿಯಾಗಿದ್ದ ಶಿಕ್ಷಕಿಯೊಬ್ಬರಿಗೆ ಸೋಂಕಿನ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಶಿಕ್ಷಕಿ ಸೇರಿದಂತೆ ಪರೀಕ್ಷೆಗೆ ನಿಯುಕ್ತಿಯಾಗಿದ್ದ ಎಲ್ಲ ಪರೀಕ್ಷಾ ಸಿಬ್ಬಂದಿಯನ್ನು ಪರೀಕ್ಷಾ ಕೆಲಸದಿಂದ ವಿಮುಕ್ತಿಗೊಳಿಸಿ ಇಡೀ ಕೇಂದ್ರಕ್ಕೆ ಬೇರೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರವನ್ನು ಸ್ಯಾನಿಟೈಸ್ ಮಾಡಲಾಗಿದೆ. ಇಂದು ಅಲ್ಲಿ ಪರೀಕ್ಷೆ ಪ್ರಶಾಂತ ವಾತಾವರಣದಲ್ಲಿ ನಡೆದಿದೆ. ಒಟ್ಟಾರೆಯಾಗಿ ಇಂದು 2879 ಪರೀಕ್ಷಾ ಕೇಂದ್ರಗಳು ಮತ್ತು 330 ಬ್ಲಾಕ್ ಪರೀಕ್ಷಾ ಕೇಂದ್ರಗಳಲ್ಲಿ ವಿಜ್ಞಾನ ಭಾಷಾ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಸ್ವಯಂ ಸೇವಕರು ಅತ್ಯಂತ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮುಂದೆ ಬಾಕಿ ಇರುವ ಪರೀಕ್ಷೆಗಳ ಯಶಸ್ಸಿಗೂ ಅವರ ಬದ್ಧತೆ ಇದೇ ರೀತಿ ಇರಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ವ್ಯವಸ್ಥೆ ಮೇಲೆ ವಿಶ್ವಾಸವಿಟ್ಟುಕೊಳ್ಳಬೇಕೆಂದು ಮನವಿ.
ಶಿಕ್ಷಣ ಇಲಾಖೆ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆಯನ್ನು ಬರೆಯುವ ವಾತಾವರಣವನ್ನು ಕಲ್ಪಿಸಿದ್ದು ಯಾವುದೇ ವಿದ್ಯಾರ್ಥಿಗಳು ವಿಚಲಿತಗೊಳ್ಳದೇ ಇಂತಹ ಸಂದರ್ಭದಲ್ಲಿ ಕೇವಲ ತಮ್ಮ ಓದಿನ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸಬೇಕು ಮತ್ತು ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯಬೇಕು. ಯಾವುದೇ ಪೋಷಕರು ಆತಂಕಕ್ಕೊಳಗಾಗದೇ, ತಮ್ಮ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಂಡಿರುವ ಈ ಕ್ರಮದ ಕುರಿತು ಭರವಸೆಯೊಂದಿಗೆ ತಮ್ಮ ಮಕ್ಕಳನ್ನು ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕೆಂದು ಸಚಿವರು ಅಧಿಕಾರಿಗಳನ್ನು ಕೋರಿದರು. ನಾಲ್ಕು ದಿನಗಳ ಪರೀಕ್ಷಾ ಪ್ರಕ್ರಿಯೆಗಳು ಮುಕ್ತಾಯಗೊಂಡಿದ್ದು, ಸಮಾಜ ವಿಜ್ಞಾನ, ಪ್ರಥಮ ಮತ್ತು ತೃತೀಯ ಭಾಷೆಗಳು ಮಾತ್ರವೇ ಬಾಕಿಯಿರುತ್ತವೆ. ಮಕ್ಕಳು ಯಾವುದೇ ಆತಂಕವಿಟ್ಟುಕೊಳ್ಳದೇ ಮುಂದಿನ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದಲೇ ಬರೆಯಲೆಂದು ಸಚಿವರು ಸೂಚಿಸಿದ್ದಾರೆ.