ಎಸ್ಸೆಸ್ಸೆಲ್ಸಿ ಕಟ್ಟುನಿಟ್ಟಿನ ಪರೀಕ್ಷೆ ನಡೆಸಿ: ಮಹೇಶ್ ವಿ ಪೂಜಾರ

SSLC conducts strict exams: Mahesh V Pujara

ಎಸ್ಸೆಸ್ಸೆಲ್ಸಿ ಕಟ್ಟುನಿಟ್ಟಿನ ಪರೀಕ್ಷೆ ನಡೆಸಿ: ಮಹೇಶ್ ವಿ ಪೂಜಾರ

ಹೂವಿನ ಹಡಗಲಿ 13:  ಮಾರ್ಚ್‌ ಏಪ್ರಿಲ್ ತಿಂಗಳಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮಂಡಳಿ ನಿಯಮಾನುಸಾರ ಕಟ್ಟುನಿಟ್ಟಾಗಿ ನಿರ್ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಹೇಳಿದರು.ಪಟ್ಟಣದ ಸರ್ಕಾರಿ ಅನುದಾನಿತ ತುಂಗಭದ್ರಾ ಪ್ರೌಢಶಾಲೆಯಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಮುಖ್ಯ ಅಧೀಕ್ಷಕರ ಕಸ್ಟೋಡಿಯನ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ವೆಬ್ ಕಾಸ್ಟಿಂಗ್‌: ತಾಲೂಕಿನ 9 ಪರೀಕ್ಷಾ ಕೇಂದ್ರಗಳಲ್ಲಿ ಕಳೆದ ವರ್ಷದಂತೆ ಈ ವರ್ಷವೂ ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಯಲಿದೆ.ಪರೀಕ್ಷೆ ನಡೆಯುವ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿರಿ.ನಿಯಮಿತವಾಗಿ ವಿದ್ಯುತ್ ಸಂಪರ್ಕ ಇರುವ ಹಾಗೆ ಕ್ರಮ ವಹಿಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆ,ಶೌಚಾಲಯ ಸ್ವಚ್ಛತೆ ಇರುವ ಹಾಗೆ ಕ್ರಮ ಕೈಗೊಳ್ಳಬೇಕು ಎಂದರು.ಈ ವರ್ಷ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ದಿನದ ಹಾಜರಾತಿ ಆನ್ ಲೈನ್ ನಲ್ಲಿ ನೀಡಬೇಕು.ತಪ್ಪಾಗದಂತೆ ಗೈರು ಹಾಜರಾಗುವ ವಿದ್ಯಾರ್ಥಿಗಳ ಮಾಹಿತಿ ನೀಡಿರಿ ಎಂದು ತಿಳಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲಾಧಿಕಾರಿಗಳು, ಉಪ ನಿರ್ದೇಶಕರು ಜಿಲ್ಲಾ ಮಟ್ಟದ ಸಭೆಯಲ್ಲಿ ನೀಡಿದ ಮಾಹಿತಿಯನ್ನು ಅನುಪಾಲನೆ ಮಾಡಿರಿ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ ಹೇಳಿದರು.ಎಸ್ಸೆಸ್ಸೆಲ್ಸಿ ತಾಲೂಕು ನೋಡಲ್ ಅಧಿಕಾರಿ ಎಚ್ ಮಲ್ಲಿಕಾರ್ಜುನ ಕೊಠಡಿ ಮೇಲ್ವಿಚಾರಕರ ನೇಮಕ ಕರ್ತವ್ಯ ಸೇರಿದಂತೆ ಪರೀಕ್ಷೆಗೆ ಸಂಬಂಧಿಸಿದ ಉಪಯುಕ್ತ ಮಾಹಿತಿ ಹಂಚಿಕೊಂಡರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಹನುಮಂತಪ್ಪ,ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ ಎಂ ಕಾಂತೇಶ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶಿವಲಿಂಗಪ್ಪ ರಾಜ್ಯ ಸಹ ಕಾರ್ಯದರ್ಶಿ ಗಡ್ಡಿ ಶಿವಕುಮಾರ್, ಮುಖ್ಯ ಗುರುಗಳಾದ ಸುರೇಶ ಅಂಗಡಿ ಇತರರು ಉಪಸ್ಥಿತರಿದ್ದರು.ತಾಲೂಕಿನ ಎಸ್ಸೆಸ್ಸೆಲ್ಸಿ 9 ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಉಪ ಮುಖ್ಯಸ್ಥರು, ಪ್ರಶ್ನೆ ಪತ್ರಿಕೆ ಕಸ್ಟೋಡಿಯನ್ ಸೇರಿದಂತೆ ಇತರರು ಭಾಗವಹಿಸಿದ್ದರು.