ನವದೆಹಲಿ, ಡಿ 17: ಪೌರತ್ವ ಕಾನೂನಿನ ವಿರುದ್ಧ ತೀವ್ರ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಮಧ್ಯೆಯೇ, ಬಿಜೆಪಿ ಮಂಗಳವಾರ ಹಿಂಸಾತ್ಮಕ ಪ್ರತಿಭಟನೆಯ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಕೈವಾಡವಿದೆ ಎಂದು ಆರೋಪಿಸಿದೆ.ಹಿಂಸಾತ್ಮಕ ಸಿಎಬಿ ವಿರೋಧಿ ಪ್ರತಿಭಟನೆಗಳ ಹಿಂದೆ ನಿಷೇಧಿತ ಉಗ್ರಗಾಮಿ ಇಸ್ಲಾಮಿಕ್ ಮೂಲಭೂತವಾದಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದೆ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಹತ್ತು ಜನರನ್ನು ಬಂಧಿಸಿರುವ ದಿನದಂದೇ ಬಿಜೆಪಿ ಮುಖಂಡ ಈ ಟ್ವೀಟ್ ಮಾಡಿದ್ದಾರೆ.ಭಾನುವಾರ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ವೇಳೆ ಹಿಂಸಾಚಾರ ಭುಗಿಲೆದ್ದು ನಾಲ್ಕು ಡಿಟಿಸಿ ಬಸ್ಸುಗಳು, ಹತ್ತು ಪೊಲೀಸ್ ಗಸ್ತು ಬೈಕುಗಳು ಮತ್ತು 100 ಖಾಸಗಿ ವಾಹನಗಳಿಗೆ ಹಾನಿಯಾಗಿದ್ದವು. ಕನಿಷ್ಠ 30 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸರಣಿ ಟ್ವೀಟ್ಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿನ ಹಿಂಸಾಚಾರಕ್ಕೆ ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ಕಾರಣ ಎಂದು ಆರೋಪಿಸಿದ್ದರು.