ನವದೆಹಲಿ, ಮಾ ೧೧: ಕಾಂಗ್ರೆಸ್ ಪಕ್ಷಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದ ಗ್ವಾಲಿಯರ್ ರಾಜವಂಶಸ್ಥ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬುಧವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸಮ್ಮುಖದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ಹಲವು ಕೇಂದ್ರ ಸಚಿವರು, ಬಿಜೆಪಿ ಹಿರಿಯರು ಭಾಗವಹಿಸಿದ್ದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರೊಂದಿಗಿನ ತೀವ್ರ ಭಿನ್ನಾಭಿಪ್ರಾಯಗಳಿಂದಾಗಿ ಸಿಂಧಿಯಾ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದಲ್ಲಿ ಸೂಕ್ತ ಪ್ರಾಮುಖ್ಯತೆ ಲಭಿಸಲಿಲ್ಲ ಎಂದು ಮೊದಲಿನಿಮದಲೂ ಅಸಮಾಧಾನಗೊಂಡಿದ್ದ ಸಿಂಧಿಯಾ ಮಂಗಳವಾರ ದಿಢೀರ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ನಂತರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದರು. ಈ ಬೆಳವಣಿಗೆ ದೇಶದ ರಾಜಕೀಯ ವಲಯದಲ್ಲಿ ಅಚ್ಚರಿಮೂಡಿಸಿದೆ. ಇನ್ನೂ ನಿರೀಕ್ಷೆಯಂತೆ ಬಿಜೆಪಿ ಸೇರಿರುವ ಸಿಂಧಿಯಾ ಅವರನ್ನು ರಾಜ್ಯಸಭೆಗೆ ಆಯ್ಕೆಮಾಡಿ, ಕೇಂದ್ರ ಸಚಿವ ಸಂಪುಟ ಸ್ಥಾನ ಕಲ್ಪಿಸಲಾಗುವುದು ಎಂಬ ಬಿಜೆಪಿ ವಲಯದಲ್ಲಿ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ. ಈ ಕುರಿತು ಬುಧವಾರ ರಾತ್ರಿಯ ವೇಳೆಗೆ ಸ್ಪಷ್ಟವಾಗುವ ನಿರೀಕ್ಷೆಯಿದೆ. ಮತ್ತೊಂದೆಡೆ ಬಿಜೆಪಿ ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆಗೆ ಪ್ರಯತ್ನಿಸುತ್ತಿದೆ.