ದಕ್ಷಿಣ ಮತಕ್ಷೇತ್ರದ 16 ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ರೂ.115 ಕೋಟಿ ರೂ. ಪ್ರಸ್ತಾವಣೆ

ಅಭಯ ಪಾಟೀಲರು ಯಳ್ಳೂರ ಗ್ರಾಮಕ್ಕೆ ಭೇಟಿ

ಬೆಳಗಾವಿ 02: ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನಾಲ್ಕು ಗ್ರಾಮ ಪಂಚಾಯತಿಗಳು ಬರುತ್ತಿದ್ದು, ನಾಲ್ಕು ಪಂಚಾಯತಗಳ ವ್ಯಾಪ್ತಿಯಲ್ಲಿ 12 ಹಳ್ಳಿಗಳು ಬರುತ್ತವೆ. ಈ ಎಲ್ಲ ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ರೂ. 115 ಕೋಟಿ ರೂಪಾಯಿಗಳ ವೆಚ್ಚದ ಪ್ರಸ್ತಾವಣೆ ಸಿದ್ಧಪಡಿಸಲಾಗುತ್ತಿದೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ ದಕ್ಷಿಣ ಮತಕ್ಷೇತ್ರದ ಯಳ್ಳೂರ ಗ್ರಾಮಕ್ಕೆ ಜಿಲ್ಲಾ ಪಂಚಾಯತಿಯ ಕುಡಿಯುವ ನೀರಿನ ವಿಭಾಗದ ಅಧಿಕಾರಿಗಳೊಂದಿಗೆ ಬೇಟಿ ನೀಡಿದ ಅಭಯ ಪಾಟೀಲ ಗ್ರಾಮದ ಹಿರಿಯರೊಂದಿಗೆ ಸಮಾಲೋಚನೆ ನಡೆಸಿದರು. ಯಳ್ಳೂರ ಗ್ರಾಮದಲ್ಲಿ ಹದಿನೈದು ದಿನಕ್ಕೊಂದು ಬಾರಿ ನೀರು ಬಿಡಲಾಗುತ್ತಿರುವ ವಿಷಯ ತಮ್ಮ ಗಮನಕ್ಕೆ ಬಂದಿದೆ ಅದಕ್ಕಾಗಿ ಅಧಿಕಾರಿಗಳ ಸಮೇತ ಇಲ್ಲಿಗೆ ಬಂದಿದ್ದೇನೆ. ದಕ್ಷಿಣ ಮತಕ್ಷೇತ್ರದ ಎಲ್ಲ ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಂಕಲ್ಪ ಮಾಡಲಾಗಿದೆ. 115 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗುತ್ತದೆ. ಡಿಸಂಬರ ತಿಂಗಳೊಳಗಾಗಿ ಈ ಯೋಜನೆಗೆ ಮಂಜೂರಾತಿ ಪಡೆದು ಎರಡು ವರ್ಷದಲ್ಲಿ ಈ ಯೋಜನೆ ಪೂರ್ಣಗೊಳಿಸುವ ಗುರಿ ಇದ್ದು, ಈ ಯೋಜನೆ ಅನಿಷ್ಠಾನಕ್ಕೆ ಬಂದರೆ ದಕ್ಷಿಣ ಮತಕ್ಷೇತ್ರದ ಎಲ್ಲ ಹಳ್ಳಿಗಳ ನೀರಿನ ಸಮಸ್ಯೆ ನಿವಾರಣೆ ಆಗುತ್ತದೆ. ಎಂದು ಅಭಯ ಪಾಟೀಲ ಯಳ್ಳೂರ ಗ್ರಾಮಸ್ಥರಿಗೆ ಭರವಸೆ ನೀಡಿದರು.

ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಯಳ್ಳೂರ, ಪೀರನವಾಡಿ, ಧಾಮಣೆ (ಎಸ್) ಹಾಗೂ ಮಚ್ಚೆ ಈ ಎಲ್ಲ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮಸ್ಕೊಂಡನಹಟ್ಟಿ, ದೇವಗನಹಟ್ಟಿ, ಕುರುಬರಹಟ್ಟಿ, ಅವಚಾರಹಟ್ಟಿ, ಯರಮಾಳ, ಝಾಡ-ಶಹಾಪೂರ, ಬಾಳಗಮಟ್ಟಿ, ಹುಂಚ್ಯಾನಹಟ್ಟಿ ಹಾಗೂ ಕೇದಾರವಾಡಿ ಸೇರಿದಂತೆ ಕ್ಷೇತ್ರದ ಒಟ್ಟು ಹದಿನಾರು ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಈ ಯೋಜನೆಯನ್ನು ಮುಂದಿನ ವರ್ಷದಿಂದ ಆರಂಭಿಸಿ ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಸಂಕಲ್ಪ ಮಾಡಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.

ಬೆಳಗಿನ ಜಾವ 6.30 ಘಂಟೆಗೆ ಜಿಲ್ಲಾ ಪಂಚಾಯ್ತಿಯ ಅಧಿಕಾರಗಳೊಂದಿಗೆ ಅಭಯ ಪಾಟೀಲರು ಯಳ್ಳೂರ ಗ್ರಾಮಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಆಲಿಸಿದ್ದಕ್ಕೆ ಯಳ್ಳೂರ ಗ್ರಾಮದ ಹಿರಿಯರು ಅಭಯ ಪಾಟೀಲರ ಸಾಮಾಜಿಕ ಕಳಕಳಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.