ಅಟಲ್ ಮಿಷನ್ ಅಡಿ ಕೇಂದ್ರದಿಂದ 6,000 ಕೋಟಿ ರೂ ಮಂಜೂರು: ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಯೋಜನೆ ಜಾರಿ

ನವದೆಹಲಿ, ಮಾರ್ಚ್ 19, ಅಂತರ್ಜಲ ವಾರ್ಷಿಕ ಶೇ 20 ರ ಪ್ರಮಾಣದಲ್ಲಿ ಶೀಘ್ರವಾಗಿ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ, ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಅಟಲ್ ಮಿಷನ್ ಅಡಿ 6,000 ಕೋಟಿ ರೂ. ಒದಗಿಸಿದೆ ಎಂದು ಜಲಶಕ್ತಿ ಸಚಿವ  ಗಜೇಂದ್ರ ಸಿಂಗ್ ಶೇಖಾವತ್ ಗುರುವಾರ ಲೋಕಸಭೆಗೆ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಜನತಾದಳ (ಸಂಯುಕ್ತ) ರಾಜೀವ್ ರಂಜನ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳ 78 ಜಿಲ್ಲೆಗಳಲ್ಲಿ ಸದ್ಯ ಅಟಲ್ ಜಲ ಮಿಷನ್ ಜಾರಿಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ನೀರಿನ ಅತಿಯಾದ ಶೋಷಣೆ ಮತ್ತು ನಿರಂತರವಾಗಿ ಕುಸಿಯುತ್ತಿರುವ ಅಂತರ್ಜಲವನ್ನು ಕ್ರಮಬದ್ಧಗೊಳಿಸುವ ಉದ್ದೇಶದಿಂದ, ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೂಕ್ತವಾದ ಅಂತರ್ಜಲ ಶಾಸನವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮಾದರಿ ಮಸೂದೆಯನ್ನು ಜಾರಿಗೆ ತಂದಿದೆ. ಮಾದರಿ ಮಸೂದೆ ರೀತಿಯಲ್ಲಿ ಅಂತರ್ಜಲ ಕಾನೂನನ್ನು 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಂಗೀಕರಿಸಿವೆ ಎಂದು ಶೇಖಾವತ್ ಹೇಳಿದ್ದಾರೆ. ನೀರಿನ ಕೊರತೆಯಿರುವ 256 ಜಿಲ್ಲೆಗಳಲ್ಲಿನ ಅಂತರ್ಜಲ ಪರಿಸ್ಥಿತಿ ಸೇರಿದಂತೆ ನೀರಿನ ಲಭ್ಯತೆಯನ್ನು ಸುಧಾರಿಸಲು ಕೇಂದ್ರ ಸರ್ಕಾರವು ಜಲಶಕ್ತಿ ಅಭಿಯಾನವನ್ನು ಆರಂಭಿಸಿದೆ ಎಂದು ಸಚಿವರು ತಿಳಿಸಿದ್ದಾರೆ.