ಸಾಲು, ಸಾಲು ಪ್ರಕರಣಗಳ ವಿಚಾರಣೆ: ಎಲ್ಲರ ಚಿತ್ತ ಸುಪ್ರೀಂನತ್ತ ...!

ನವದೆಹಲಿ, ಜನವರಿ, 6 , ಚಳಿಗಾಲದ ರಜೆಯ ಬಳಿಕ ಸೋಮವಾರದಿಂದ ಪುನರಾರಂಭವಾಗಲಿರುವ ಸುಪ್ರೀಂ ಕೋರ್ಟ್  ಮುಂದೆ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪ್ರಕರಣ,ಸೇರಿದಂತೆ ಹಲವು ಮಹತ್ವದ ಪ್ರಕಣಗಳ ವಿಚಾರಣೆ ನಡೆಯಲಿದ್ದು,  ಎಲ್ಲರ ಕಣ್ಣು, ಚಿತ್ತ   ಕೋರ್ಟ್ ನತ್ತ ನೆಟ್ಟಿದೆ. ಮಹತ್ವದ ಪ್ರಕರಣಗಳ ಪೈಕಿ  ಶಬರಿಮಲೆ ವಿವಾದವೂ  ಒಂದಾಗಿದ್ದು ಅದರ ವಿಚಾರಣೆಯನ್ನು ಏಳು ಸದಸ್ಯರ ಸಾಂವಿಧಾನಿಕ ಪೀಠ ನಡೆಸಲಿದೆ. ಮೊದಲ ದಿನವೇ, ಟಾಟಾ ಸನ್ಸ್ ಕಂಪೆನಿ ಹಾಗೂ ಸೈರಸ್ ಮಿಸ್ತ್ರಿ ನಡುವಿನ ವ್ಯಾಜ್ಯದ ವಿಚಾರಣೆ ನಡೆಯುವ  ಸಾಧ್ಯತೆಯಿದೆ.

ಆನಂತರದ ದಿನಗಳಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕೆನೆಪದರಿನಲ್ಲಿ ಇರುವವರಿಗೆ ಮೀಸಲಾತಿ ಅನ್ವಯವಾಗದು ಎಂಬ 2018ರ ಸುಪ್ರೀಂ ಕೋರ್ಟ್ ನ ತೀರ್ಪನ್ನು 7 ಸದಸ್ಯರ ಪೀಠ  ಮತ್ತೆ ವಿಚಾರಣೆಗೊಳಪಡಿಸಬೇಕು ಎಂದು ಕೇಂದ್ರ ಸರಕಾರ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಯಲಿದೆ ಎನ್ನಲಾಗಿದೆ.  ಇನ್ನು, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಅನಂತರ ಅಲ್ಲಿನ ಸ್ಥಳೀಯ ಆಡಳಿತ ಹಾಕಿದ್ದ  ಪ್ರತಿಬಂಧಕಾಜ್ಞೆಗಳನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಸಲ್ಲಿಸಿರುವ ಅರ್ಜಿ ವಿಚಾರಣೆಯೂ  ನಡೆಯಲಿದೆ. ಜನವರಿ  22ರಿಂದ ಮುಖ್ಯ ನ್ಯಾಯಮೂರ್ತಿ  ಎಸ್.ಎ. ಬೋಬ್ಡೆ ನೇತೃತ್ವದ ಪೀಠದಿಂದ ಪೌರತ್ವ ಕಾಯ್ದೆ ತಿದ್ದುಪಡಿ ಪ್ರಕರಣ ವಿಚಾರಣೆ ನಡೆಯಲಿದೆ.