ಮೇಲ್ಛಾವಣೆ ಕುಸಿತ: ತಪ್ಪಿದ ಅನಾಹುತ ವೃದ್ಧ ದಂಪತಿ ಪಾರು

ಲೋಕದರ್ಶನವರದಿ

ಮುಧೋಳ : ಬಾಗಲಕೋಟ ಜಿಲ್ಲೆಯಲ್ಲಿ ಮಹಾ ಪ್ರವಾಹದಿಂದ ತತ್ತರಿಸಿ ಈಗ ರೋಸಿ ಹೋಗಿರುವ ಜನ ಸರಕಾರದಿಂದ ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದ್ದರೆ, ಈಗ ಮತ್ತೊಮ್ಮೆ ಸತತ ಮಳೆಯಿಂದ ಹಳೆಯ ಮನೆಗಳು ಕುಸಿದು ಬೀಳುತ್ತಿದ್ದು ಜನ ಮತ್ತೊಮ್ಮೆ ಆತಂಕಕ್ಕೆ ಒಳಗಾಗಿದ್ದಾರೆ.

   ನಗರದ ಸುಣಗಾರ ಗಲ್ಲಿಯಲ್ಲಿರುವ ವೃದ್ಧ ದಂಪತಿಗಳು ವಾಸಿಸುತ್ತಿದ್ದ ಮೇಲ್ಮುದ್ದಿ(ಮಣ್ಣಿನ) ಮನೆ ಹಠ್ಠಾತ್ತನೆ ಮೇಲ್ಛಾವಣೆ ಕುಸಿದು ಬಿದ್ದಿದೆ. ಬಚ್ಚಲು ಕೋಣೆಯಿಂದ ಅದೇ ತಾನೆ ಹೊರ ಬಂದಿದ್ದ ವೃದ್ಧ ಶಾಬೀರಾ ಲಾಲಸಾಬ ಅಮ್ಮಲಜೇರಿ ಅದೃಷ್ಟ್ದಿಂದ ಪಾರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

   ಗಂಡು ಮಕ್ಕಳಿಲ್ಲದ ಲಾಲಸಾಬ ಇವರ ಮನೆಯಲ್ಲಿ ಇವರ ಮಗಳು, ಮೊಮ್ಮಕ್ಕಳು ಸಹ ಇದೇ ಮನೆಯಲ್ಲಿ ವಾಸಿಸುತ್ತಿದ್ದರು. ಮುಂಜಾಗೃತೆ ಅರಿತು ಇವರ ಅಳಿಯ ಬಾಡಿಗೆ ಮನೆಗೆ ಹೋಗಿದ್ದಾನೆ. ಈ ಘಟನೆ ರಾತ್ರಿ ವೇಳೆ ಸಂಭವಿಸಿದ್ದರೆ ಪ್ರಾಣ ಹಾನಿ ಸಂಭವವಿತ್ತು. ಹಿರಿಯರ ಪುಣ್ಯೆ , ದೇವರ ಕೃಪೆ ಇದೆ. ಎಂದು ವೃದ್ಧದಂಪತಿಗಳು ಹೇಳಿದರು.

   ಅಧಿಕಾರಿ ಭೇಟಿ ನೀಡಲಿ  :  ಕಳೆದ 2-3. ದಿನದ ಹಿಂದೆ ಬಿದ್ದ ನಮ್ಮ ಮನೆ ಸಂಬಂಧಿಸಿದ ಅಧಿಕಾರಿಗಳು ಬಂದು ನೋಡಿಕೊಂಡು ಹೋಗಲಿ ಅಂತಾ ಮೇಲ್ಛಾವಣೆಯ ತೊಲೆ, ಬಿದರಿನ ಬಾಂಬೂ, ಮಣ್ಣು ಇತರೆ ಸಾಮಾನುಗಳು ತೆಗೆಯದೇ ಹಾಗೇ ಇಟ್ಟುಕೊಂಡು ಯಾರಾದರೂ ಅಧಿಕಾರಿಗಳ ಗಮನಕ್ಕೆ ತಂದು ಸರಕಾರದಿಂದ ಪರಿಹಾರ ದೊರಕಿಸಿಕೊಡುವರು ಎಂದು ನಂಬಿ ಕಳೆದ 2-3.ದಿನಗಳಿಂದ ಇದ್ದ ಸ್ಥಿತಿಯಲ್ಲೇ ಬದುಕು ನಡೆಸುತ್ತಿದ್ದೇವೆ. ಎಂದು ವೃದ್ಧ ದಂಪತಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.