ಮುಂಬೈ, ಮಾ 31,ಕೊರೊನಾ ವೈರಸ್ ಸೋಂಕು ವಿರುದ್ಧದ ಹೋರಾಟವನ್ನು ಬೆಂಬಲಿಸಿರುವ ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮ, ಮಂಗಳವಾರ 80 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.ಪಿಎಂ-ಕೇರ್ಸ್ ನಿಧಿಗೆ 45 ಲಕ್ಷ ರೂ., ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ. ಜೊಮಾಟೊ ಫೀಡಿಂಗ್ ಇಂಡಿಯಾಗೆ 5 ಲಕ್ಷ ರೂ. ಹಾಗೂ ಬಿದಿ ನಾಯಿಗಳ ಕಲ್ಯಾಣಕ್ಕೆ 5 ಲಕ್ಷ ರೂ. ನೆರವು ನೀಡಿರುವುದಾಗಿ ರೋಹಿತ್ ಹೇಳಿದ್ದಾರೆ. ಜತೆಗೆ 32 ವರ್ಷದ ಬಲಗೈ ಬ್ಯಾಟ್ಸ್ ಮನ್ ರೋಹಿತ್, ನಮ್ಮ ದೇಶವನ್ನು ಮೊದಲಿನ ಸ್ಥಿತಿಗೆ ತರುವ ಜವಾಬ್ದಾರಿ ನಮ್ಮ ಮೇಲಿದ್ದು, ನಮ್ಮ ನಾಯಕರ ಬೆಂಬಲಕ್ಕೆ ನಿಲ್ಲಬೇಕಾದ ಅಗತ್ಯವಿದೆ ಎಂದಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮ ಈಗಾಗಲೇ ಪಿಎಂ-ಕೇರ್ಸ್ ನಿಧಿಗೆ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಭಾರತ ಮಹಿಳಾ ಏಕದಿನ ತಂಡದ ನಾಯಕಿ ಮತ್ತು ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಸಹ ಕೊರೊನಾ ವಿರುದ್ಧದ ಹೋರಾಟಕ್ಕೆ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ.ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಫ್ರಾ, ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟದ ಪರಿಹಾರ ನಿಧಿಗೆ ಕೇಂದ್ರ ಮತ್ತು ಹರಿಯಾಣ ಸರಕಾರಗಳಿಗೆ ಒಟ್ಟು 3 ಲಕ್ಷ ರೂ. ದೇಣಿಗೆ ನೀಡಿದ್ದೇನೆ ಎಂದು ಮಂಗಳವಾರ ಹೇಳಿದ್ದಾರೆ.