ಔರಂಗಾಬಾದ್, ಫೆ 12 : ಚುನಾವಣೆಯಲ್ಲಿ ಗೆಲ್ಲಲು ಅಕ್ರಮ ಹಾಗೂ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ, ನೂತನ ಎನ್‌ಸಿಪಿ ಶಾಸಕಹಾಗೂ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರ ಮೊಮ್ಮಗ ರೋಹಿತ್ ಪವಾರ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ.
ಅವರ ಅನರ್ಹತೆ ಕೋರಿ ಬಿಜೆಪಿ ಮುಖಂಡ ರಾಮ್ ಶಿಂಧೆ ಮತ್ತು ಸ್ವತಂತ್ರ ಅಭ್ಯರ್ಥಿ ರೋಹಿತ್ ರಾಜೇಂದ್ರ ಪವಾರ್ ಅವರು ಮಂಗಳವಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಎಂ ಗವಾನೆ ವಿಚಾರಣೆ ನಡೆಸಿದರು.
ಪವಾರ್ ಅವರು ಚುನಾವಣಾ ಅವಧಿಯಲ್ಲಿ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ. ಮಾತ್ರವಲ್ಲ ಚುನಾವಣೆಯಲ್ಲಿ ಗೆಲ್ಲಲು ಅವರು ಚುನಾವಣಾ ವೆಚ್ಚಗಳನ್ನು ಮರೆಮಾಚಿದ್ದು, ಆಯೋಗಕ್ಕೆ ಸರಿಯಾದ ಮಾಹಿತಿ ನೀಡಿಲ್ಲ. ಗೆಲ್ಲಲು ಭ್ರಷ್ಟಾಚಾರದ ಮಾರ್ಗ ಅನುಸರಿಸಿದ್ದಾರೆ ಏಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.
ಬಾರಾಮತಿ ಆಗ್ರಾ ಕಂಪನಿಯ ಸಿಇಒ ಆಗಿರುವ ಪವಾರ್ ಅವರು ತಮ್ಮ ಕಂಪನಿಯ ನೌಕರರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಅವರನ್ನು ಕ್ಷೇತ್ರದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಪವಾರ್ ಪರವಾಗಿ ಮತ ಚಲಾಯಿಸಲು ಪ್ರತಿ ಮತದಾರರಿಗೆ ಎನ್‌ಸಿಪಿ 1,000 ರೂ ಪಾವತಿಸಿದೆ. ಶಿಂಧೆ ವಿರುದ್ಧದ ಮಾನಹಾನಿ ಸಂದೇಶಗಳನ್ನು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿದೆ ಎಂದೂ ಅರ್ಜಿಯಲ್ಲಿ ದೂರಲಾಗಿದೆ.
ಇನ್ನೊಬ್ಬ ಅರ್ಜಿದಾರ ರೋಹಿತ್ ರಾಜೇಂದ್ರ ಪವಾರ್, ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ್ದರೂ ತಮ್ಮ ನಾಮಪತ್ರವನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಶಾಸಕ ರೋಹಿತ್ ಪವಾರ್ ಅವರಿಗೆ ನ್ಯಾಯಾಲಯ ನೋಟಿಸ್ ನೀಡಿದ್ದು, ಮುಂದಿನ ವಿಚಾರಣೆ ಮಾರ್ಚ್ 13 ರಂದು ನಡೆಯಲಿದೆ.