13 ವರ್ಷಗಳ ವೃತ್ತಿ ಬದುಕಿನಲ್ಲಿ ರೋಹಿತ್‌ ಸಿಡಿಸಿದ 3 ದ್ವಿಶತಕಗಳು

ನವದೆಹಲಿ, ಏ 30,ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಮನದಲ್ಲಿ 'ಹಿಟ್‌ಮ್ಯಾನ್‌' ಎಂದೇ ಖ್ಯಾತಿ ಪಡೆದಿರುವ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಗುರುವಾರ ತಮ್ಮ 33ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡದ ಉಪನಾಯಕ ಆಗಿರುವ ರೋಹಿತ್‌ ಶರ್ಮಾ, ಅವರ 33ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಒಡಿಐ ಕ್ರಿಕೆಟ್‌ನಲ್ಲಿ ಅವರ 3 ದ್ವಿಶತಕಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
2007ರ ಜೂನ್‌ 23ರಂದು ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ರೋಹಿತ್‌, ಒಡಿಐನಲ್ಲಿ ಮೂರು ದ್ವಿಶತಕ ಬಾರಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕನಾಗಿರುವ ಸ್ಟೈಲಿಶ್ ಬಲಗೈ ಬ್ಯಾಟ್ಸ್‌ಮನ್‌ನ ಮೂರು ಒಡಿಐ ಮಾಸ್ಟರ್‌ ಕ್ಲಾಸ್‌ ಇನಿಂಗ್ಸ್‌ಗಳು ಹೀಗಿವೆ.
2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ 203 ರನ್‌ ಗಳಿಸಿದ ರೋಹಿತ್ ತಾವೊಬ್ಬ ರನ್ ದಾಹ ಹೊಂದಿರುವ ಬ್ಯಾಟ್ಸ್ ಮನ್  ಎಂಬುದನ್ನು ಸಾಬೀತುಪಡಿಸಿದ್ದರು. 158 ಎಸೆತಗಳಲ್ಲಿ 209 ರನ್‌ ಚಚ್ಚಿ ಭಾರತದ ಪರ ಒಡಿಐನಲ್ಲಿ ದ್ವಿಶತಕ ಬಾರಿಸಿದ ಮೂರನೇ ಬ್ಯಾಟ್ಸ್‌ಮನ್‌ ಎನಿಸಿದರು. ರೋಹಿತ್‌ ವೀರಾವೇಶದ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ 383 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿ ಆಸ್ಟ್ರೇಲಿಯಾ ಎದುರು 57 ರನ್‌ಗಳ ಭರ್ಜರಿ ಜಯ ದಾಖಲಿಸಿತು. ರೋಹಿತ್‌ ಇನಿಂಗ್ಸ್‌ನಲ್ಲಿ 12 ಫೋರ್‌ ಮತ್ತು 16 ಸಿಕ್ಸರ್‌ಗಳು ಹೊರಹೊಮ್ಮಿದ್ದವು.2014ರಲ್ಲಿ ಈಡನ್‌ ಗಾರ್ಡನ್ಸ್‌ನಲ್ಲಿ  ಶ್ರೀಲಂಕಾ ವಿರುದ್ಧ 264 ರನ್ ಕಲೆಹಾಕಿದ ಮುಂಬೈ ಆಟಗಾರ, 173 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. 2017ರಲ್ಲಿ ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ 208 ರನ್‌ ಸಿಡಿಸಿದ ರೋಹಿತ್,  ಇದಕ್ಕಾಗಿ ಕೇವಲ 153 ಎಸೆತಗಳನ್ನು ಎದುರಿಸಿದ್ದರು.ಭಾರತ ತಂಡದ ಪರ 224 ಒಡಿಐ, 108 ಅಂತಾರಾಷ್ಟ್ರೀಯ ಟಿ20 ಮತ್ತು 32 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಮುಂಬೈಕರ್‌ ರೋಹಿತ್‌, ಕ್ರಮವಾಗಿ 9,115, 2,773 ಮತ್ತು 2,141 ರನ್‌ಗಳನ್ನು ಗಳಿಸಿದ್ದಾರೆ.