ನಾಗನೂರ ಪಿ ಎ ಗ್ರಾಮದಿಂದ ಸಂಬರಗಿ ಗ್ರಾಮಕ್ಕೆ ರಸ್ತೆ ಸಂಪರ್ಕ ಸ್ಥಗಿತ

ತೋಟದ ವಸತಿ ಮಕ್ಕಳು ಶಾಲೆಗೆ ತೆರಳಲು ತುಂಬಿ ಹರಿಯುತ್ತಿರುವ ಹಳ್ಳ, ಇಲ್ಲಾ ಕೆಸರು ಗದ್ದೆಯಲ್ಲಿ ದಾರಿ 

ಸುಭಾಷ ಕಾಂಬಳೆ 

ಸಂಬರಗಿ 03: ಗ್ರಾಮದಲ್ಲಿ ರಾಜಕೀಯ ಪ್ರತಿಷ್ಠೆಗಾಗಿ ಗಡಿ ಭಾಗದ ನಾಗನೂರ ಪಿ ಎ ಗ್ರಾಮದಿಂದ ಸಂಬರಗಿ ಗ್ರಾಮಕ್ಕೆ ರಸ್ತೆ ಸಂಪರ್ಕ ಸ್ಥಗಿತಗೊಳಿಸಿದ್ದು, ತೋಟದ ವಸ್ತಿಯಲ್ಲಿ ವಾಸ ಮಾಡುತ್ತಿರುವ ಮಕ್ಕಳಿಗೆ ಕೆಸರಿನಲ್ಲಿ ಹೋಗುವ ಪರಿಸ್ಥಿತಿ ಎದುರಾಗಿದೆ.  ಗ್ರಾಮದಲ್ಲಿ ರಾಜಕೀಯ ತಿಕ್ಕಾಟದಲ್ಲಿ ಮಕ್ಕಳಿಗೆ ರಸ್ತೆ ಕಂಟಕ ಶುರುವಾಗಿದೆ. ಕಂಟೇಕರ್ ತೋಟ, ಹಣಮಾಪುರ ತೋಟ್ ಚೌಗುಲಾ ತೋಟ, ಇನ್ನಿತರ ತೋಟ ಸೇರಿ ಒಟ್ಟು 200 ಕುಟುಂಬಗಳ, ರೈತರು ತಮ್ಮ ತೋಟದ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ತೋಟದಿಂದ ಸುಮಾರು 70 ರಿಂದ 80 ಮಕ್ಕಳು ಸಂಬರಗಿ ಗ್ರಾಮಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಹೋಗುತ್ತಿದ್ದಾರೆ. ತೋಟದ ಸರಕಾರಿ ಶಾಲಾ ಮಕ್ಕಳ ಅಗ್ರಾಣಿ ಹಳ್ಳ ದಾಟಿ ಶಾಲೆಗೆ ಹೋಗುತ್ತಿದ್ದು ಭೂ ಮಾಪನ ಅಧಿಕಾರಿಗಳ ಎಡವಟ್ಟಿನಿಂದ ಎರಡು ಗ್ರಾಮಗಳ ಸಂಪರ್ಕ ಬಂದ್ ಆಗಿದೆ. ಶಾಲಾ ಮಕ್ಕಳು ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಶಾಲೆಗೆ ಹೋಗಬೇಕು ಇಲ್ಲವಾದರೆ ಅವರ ಇವರ ಹೊಲಗಳನ್ನು ಸುತ್ತಿ ಕೆಸರಿನಲ್ಲಿ ಶಾಲೆಗೆ ಸೇರಬೇಕು. ಇಂಥದ್ದರಲ್ಲಿ ಮಕ್ಕಳ ಜೀವಕ್ಕೆ ಅಪಾಯ ಅದರೆ ಹೊಣೆಗಾರ ಯಾರು ಎಂದು ಪಾಲಕರು ಪ್ರಶ್ನೆ ಮಾಡುತಿದ್ದಾರೆ. 

ಗಡಿ ಭಾಗದ ನಾಗನೂರು ಪಿ ಎ ಗ್ರಾಮದ ಎಲ್ಲಾ ತೋಟದ ವಸತಿ ಜನರಿಗೆ ಹಾಗೂ ಮಕ್ಕಳಿಗೆ ನಾಗನೂರು ಪಿ ಎ ಹಾಗೂ ಸಂಬರಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಬಂದ್ ಮಾಡಿದ್ದು ಗ್ರಾಮದ ಜನರು ಅಧಿಕಾರಿಗಳಿಗೆ ಮನವಿ ಮಾಡಿದರು ನಿರ್ಲಕ್ಷ ತೋರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಎಲ್ಲಾ ತೋಟದ ವಸತಿಯಲ್ಲಿ ಯಾರಾದರು ಅನಾರೋಗ್ಯದಿಂದ ಬಳಲುತ್ತಿದ್ದರೆ ನಾವು ಅವರನ್ನು ಹೆಗಲ ಮೇಲೆ ಹೊತ್ತು ಸಾಗಬೇಕು ನಮಗೆ ರಸ್ತೆನೆ ಇಲ್ಲ ಇದ್ದ ರಸ್ತೆ ಬಂದ್ ಮಾಡಲಾಗಿದೆ. ಈ ಬಗ್ಗೆ ಯಾರು ನಮ್ಮ ಸಮಸ್ಯೆ ಪರಿಹರಿಸುವ ಕಾರ್ಯ ಮಾಡಿಲ್ಲ ಎಂದು ನಾಗನೂರ ಪಿ ಎ ಗ್ರಾಮದ ಕಂಟೇಕರ ವಸತಿ ನಿವಾಸಿ ಪ್ರಕಾಶ ಕಂಟೇಕರ ಆರೋಪಿಸಿದ್ದಾರೆ. 

ಈ ರಸ್ತೆ ಸಮಸ್ಯೆ ಬಗ್ಗೆ ಹಲವು ಬಾರಿ ಭೂ ಮಾಲೀಕರು ಹತ್ತಾರು ಬಾರಿ ತಹಸೀಲ್ದಾರ ಹಾಗೂ ಭೂ ಮಾಪಣೆಗೆ ಅರ್ಜಿ ಸಲ್ಲಿಸಿ ಅಳತೆ ಮಾಡಿಸಿದರು ಭೂ ಮಾಪನ ಅಧಿಕಾರಿಗಳು ಗೊಂದಲ ಸೃಷ್ಟಿಸಿ ರೈತರ ಮಧ್ಯೆ ವೈಮನಸ್ಸು ಹುಟ್ಟಿಸುವ ಕೆಲಸ ಮಾಡಿದ್ದಾರೆ ಎಂಬ ರೈತರ ಆರೋಪವಾಗಿದೆ. ಭೂಮಿ ಅಳತೆಯಲ್ಲಿ ನ್ಯಾಯಬದ್ಧ ನಿರ್ಣಯ ನೀಡದೆ ರಸ್ತೆಗೆ ಬೇಲಿ ಹಾಕುವಂತೆ ಮಾಡಿದ್ದಾರೆ ಎಂದು ಇಲಾಖೆ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ.  

ರಸ್ತೆ ವಿಚಾರವಾಗಿ ಸ್ಥಳೀಯ ಶಾಸಕ ರಾಜು ಕಾಗೆ ಅಥಣಿ ಭೂ ದಾಖಲೆ ಸಹಾಯಕ ನಿರ್ದೇಶಕ ಪುನೀತ ಪಾಸೋಡೆ ಅವರಿಗೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಬಗೆ ಹರಿಸುವಂತೆ ಸೂಚನೆ ನೀಡಿದ್ದರು ನಿರ್ಲಕ್ಷ ತೋರಿದ್ದಾರೆ ಎಂಬ ಆರೋಪ ಇಲ್ಲಿನ ಜನರಿಂದ ಕೇಳಿ ಬಂದಿದೆ.  

ಏನೆ ಆಗಲಿ ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳು ಮಕ್ಕಳ ಜೀವದ ಜೊತೆ ಆಟವಾಡುತ್ತಿರುವುದು ನಿಜಕ್ಕೂ ದುರಂತ, ಅವಘಡಕ್ಕೂ ಮುನ್ನ ಅಧಿಕಾರಿಗಳು ಎಚ್ಚತ್ತುಕೊಳ್ಳಬೇಕು ಎಂಬುದು ಗ್ರಾಮಸ್ಥರು ಹಾಗೂ ಮಕ್ಕಳ ಆಗ್ರಹವಾಗಿದೆ. 

ಸಮಸ್ಯೆ ನಮ್ಮ ಗಮನಕ್ಕೆ ಇದೆ ಹಿಂದೆ ಹಲವು ಬಾರಿ ರಸ್ತೆ ಮಾಪನ ಮಾಡಿ ಅಲ್ಲಿನ ರೈತರಿಗೆ ರಸ್ತೆಗೆ ಜಾಗ ನೀಡಲಾಗಿದೆ. ಆದರು ಮತ್ತೊಮ್ಮೆ ಭೂಮಾಪಣೆ ಇಲಾಖೆ ಅಧಿಕಾರಿ ಹಾಗೂ ನಾನು ಸ್ವಂತ ಭೇಟಿ ನೀಡಿ ಪರೀಶೀಲನೆ ಮಾಡಿ ಕ್ರಮ ಕೈಗೊಂಡು ರಸ್ತೆ ಮಾಡುತ್ತೇನೆ ಎಂದು ಹೇಳಿದರು.  

ಸಿದರಾಯ ಭೋಸಕೆ  

ತಹಶೀಲದಾರ ಅಥಣಿ

ಮಳೆಗಾಲದಲ್ಲಿ ಪ್ರತಿ ಬಾರಿ ನಮಗೆ ರಸ್ತೆ ಇಲ್ಲದೆ ಹರಿಯುವ ಹಳ್ಳ ದಾಟಿ ಶಾಲೆಗೆ ಹೋಗುತ್ತೇವೆ ನಮ್ಮ ಜೊತೆ ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳು ಬರುತ್ತಾರೆ. ಅವರಿಗೆ ನಾವೆ ಹಳ್ಳ ದಾಟಿಸಿ ಶಾಲೆಗೆ ಸೇರಿಸುತ್ತೇವೆ ಮತ್ತು ಹಳ್ಳದಲ್ಲಿ ನೀರು ಹೆಚ್ಚಾದಾಗ ಎರಡು ಕಿಲೋಮೀಟರ್ ಸುತ್ತಿ ಸುತ್ತಮುತ್ತಲಿನ ಕೇಸರಿನ ಜಮೀನು ದಾಟಿ ಶಾಲೆಗೆ  ತೆರಳುತ್ತೇವೆ ದಯವಿಟ್ಟು ನಮಗೆ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಮಾಡಿಕೊಡಬೇಕು.  

ನಾಗನೂರು ಪಿ ಎ ರಸ್ತೆ ಹಲವಾರು ವರ್ಷಗಳಿಂದ ಹದ್ದಿಗೆಟ್ಟು ಹೋಗಿದ್ದು ಈ ಕುರಿತು ತಾಲೂಕ ಹಾಗೂ ಜಿಲ್ಲಾ ಅಡೆಳಿತ ಗಮನಕ್ಕೆ ತಂದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಮಕ್ಕಳಿಗೆ ಕೆಸರ ಗದ್ದೆಯಲ್ಲಿ ಹಾಯ್ದು ಶಾಲೆಗೆ ಹೋಗಬೇಕಾಗುತ್ತದೆ. ತಕ್ಷಣ ಜಿಲ್ಲಾಡಳಿತ ಗಮನ ಹರಿಸಿ ನಾಗನೂರ ಪಿಎ ಹಾಗೂ ಸಂಬರಗಿ ರಸ್ತೆ ದುರುಸ್ತಿಗೊಳಿಸಿ ರಸ್ತೆ ಪ್ರಾರಂಭ ಮಾಡಬೆಕೆಂದು ಅವರು ಆಗ್ರಹಿಸಿದ್ದಾರೆ ಇಲ್ಲವಾದರೆ ಹೋರಾಟ ಮಾಡಲು ಎಚ್ಚರಿಕೆ ನೀಡಿದ್ದಾರೆ. 

ಜಗನ್ನಾಥ್ ಬಾಮನೆ 

ಬೆಳಗಾವಿ ಜಿಲ್ಲಾ ಕರವೆ ಗೌರವ ಅಧ್ಯಕ್ಷ