ಹೃದಯ ಖಾಯಿಲೆಗಳಿಗೆ ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆಯಿರಿ: ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು

ಬಳ್ಳಾರಿ 03:ಹೃದಯ ಸಂಬಂಧಿತ ಯಾವುದೇ ಖಾಯಿಲೆಗಳಿಗೆ ನಿರ್ಲಕ್ಷ್ಯ ಮಾಡದೇ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾ ಡಾ.ಯಲ್ಲಾ ರಮೇಶಬಾಬು ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಘಟಕ ಸಹಯೋಗದಲ್ಲಿ ಕೌಲ್‌ಬಜಾರ್‌ನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಹೃದಯ ದಿನ ಹಾಗೂ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಜಾಗೃತಿ ಹಾಗೂ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಹೃದಯಾಘಾತವಾಗುವುದು ಒಂದು ಭಯಾನಕ ಅನುಭವ. ಜೀವಕ್ಕೆ ಅಪಾಯಕಾರಿಯೂ ಹೌದು, ದೈನಂದಿನ ಒತ್ತಡದ ಜೀವನಶೈಲಿಯಲ್ಲಿ ಬದಲಾವಣೆಯೊಂದಿಗೆ   ಮಾನಸಿಕ ಒತ್ತಡವನ್ನು ಸೂಕ್ತವಾಗಿ ನಿಭಾಯಿಸುವ ಜೊತೆಗೆ ನಿಯಮಿತ ವ್ಯಾಯಾಮಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. 

ಕುಟುಂಬದ ಸದಸ್ಯರಲ್ಲಿ ಹೃದಯ ಸಂಬಂಧಿತ ಖಾಯಿಲೆಗಳಿದ್ದರೆ ಅಥವಾ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ನಿರಂತರ ಧೂಮಪಾನ, ಅಧಿಕ ಬೊಜ್ಜು, ಮಧ್ಯಸೇವನೆ, ಹೈ ಕೊಲೆಸ್ಟ್ರಾಲ್ ಇದ್ದಲ್ಲಿ ಹೃದಯ ಸಂಬಂಧಿತ ಕಾಯಿಲೆಗೆ ಬೇಗನೆ ತುತ್ತಾಗಬಹುದು. ಹಾಗಾಗಿ ಕನಿಷ್ಟ 30 ನಿಮಿಷಗಳ ಸರಳ ವ್ಯಾಯಾಮ, ಆಹಾರದಲ್ಲಿ ಕಡಿಮೆ ಕೊಬ್ಬಿನಾಂಶ ಬಳಸಬೇಕು. ಧ್ಯಾನ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಒಳ್ಳೆಯದು ಎಂದು ಅವರು ತಿಳಿಸಿದರು. 

ಒಂದು ವೇಳೆ ವೈದ್ಯರು ಸೂಚಿಸಿದಲ್ಲಿ ನಿಯಮಿತ ಓಷಧಿ ಸೇವನೆಯೊಂದಿಗೆ ಸದಾ ಲವಲವಿಕೆಯಿಂದ ಇರುವ ಮೂಲಕ ಕಾಯಿಲೆ ದೂರಗೊಳಿಸಬಹುದಾಗಿದೆ ಎಂದರು. 

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ ಅವರು ಮಾತನಾಡಿ, ಹೃದಯ ಸಂಬಂಧಿತ ಕಾಯಿಲೆಗಳ ಜೊತೆ ಜೊತೆಗೆ ಹಿರಿಯ ನಾಗರಿಕರ ಆರೈಕೆಯು ಮುಖ್ಯವಾಗಿದ್ದು, ಸಾಮಾನ್ಯವಾಗಿ ವಯಸ್ಸಾದಂತೆ ಕಣ್ಣಿನಪೊರೆ, ಕಿವುಡುತನ, ಅಧಿಕ ರಕ್ತದೊತ್ತಡ, ಖಿನ್ನತೆ, ನರದೌರ್ಬಲ್ಯ ರೋಗ, ದೇಹದ ಭಂಗಿಯಲ್ಲಿ ಅಸ್ಥಿರತೆ,  ಮಲಬದ್ಧತೆ ಕಾಣಿಸಿಕೊಳ್ಳುವುದು ಸಹಜವಾಗಿದೆ ಎಂದರು. 

ಇದಕ್ಕಾಗಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ವಿಶೇಷ ಕ್ಲಿನಿಕ್ ಸೇವೆಯನ್ನು ಜಿಲ್ಲಾ ಅಸ್ಪತ್ರೆ, ತಾಲೂಕಾ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನೀಡಲಾಗುವುದು. ಈ ಸಂದರ್ಭದಲ್ಲಿ ಪಿಸಿಯೋಥೆರಪಿ ಹಾಗೂ ಪೋಷಕರೊಂದಿಗೆ ಆಪ್ತಸಮಾಲೊಚನೆ ಮಾಡಲಾಗುವುದು, ಗ್ರಾಮೀಣ ಪ್ರದೇಶಗಳಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಸಹ ನೀಡಲಾಗುವ ಪ್ರಾಥಮಿಕ ಹಂತದ ಸೇವೆಗಳನ್ನು ಪಡೆಯಬೇಕು ಎಂದು ವಿನಂತಿಸಿದರು. 

*ಉಚಿತ ಆರೋಗ್ಯ ತಪಾಸಣೆ:* 

ಮಹಾನಗರಪಾಲಿಕೆ ಉಪಮೇಯರ್ ಡಿ.ಸುಕುಂ ಅವರು ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿದರು. 

ನಂತರ ಕೌಲ್‌ಬಜಾರ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಹಾಗೂ ಜಿಲ್ಲಾ ಆಸ್ಪತ್ರೆಯ ಫಿಜಿಷಿಯನ್ ಡಾ.ಜ್ಞಾನ ಅಭಿಲಾಷ್ ಅವರ ನೇತೃತ್ವದಲ್ಲಿ ಜಿಲ್ಲಾ ಎನ್‌ಸಿಡಿ ಘಟಕದ ತಂಡವು 101 ಜನರ ಪರೀಕ್ಷೆ ಮಾಡಲಾಗಿ, ಇವರಲ್ಲಿ ಹೊಸದಾಗಿ 09 ರಕ್ತದೊತ್ತಡ, 01 ಸಕ್ಕರೆ ಕಾಯಿಲೆ ಇರುವವರು ಪತ್ತೆಯಾಗಿದ್ದು, 02 ಜನರಿಗೆ ಇಸಿಜಿ ಪರೀಕ್ಷೆಗಳನ್ನು ಕೈಗೊಳ್ಳಲಾಯಿತು.  

ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ, ತಜ್ಞವೈದ್ಯರಾದ ಡಾ.ಜ್ಞಾನ ಅಭಿಲಾಷ್, ಡಾ.ರಹೀಮಾ,   ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಎನ್‌ಬಿಸಿ ಜಿಲ್ಲಾ ಸಲಹೆಗಾರರಾದ ಡಾ.ಜಬೀನಾ ತಾಜ್, ಪ್ರಶಾಂತ್, ಸಿಬ್ಬಂದಿಯರಾದ ಡಿ.ಸುನೀತಾ, ಅರುಣ್‌ಕುಮಾರ್, ರವೀಂದ್ರರೆಡ್ಡಿ, ಗಂಗಾ ಭವಾನಿ, ರುಕ್ಮಿಣಿ, ರೇಖಾ, ಹೊನ್ನುರಮ್ಮ, ಈಶ್ವರಮ್ಮ, ಚಂದ್ರ ನಾಯ್ಕ್‌, ಅನುಶ್ರೀ ಸೇರಿದಂತೆಇತರರುಇದ್ದರು.