ನವದೆಹಲಿ, ಮಾರ್ಚ್ 19, ಕಳೆದ ವರ್ಷ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ನಂತರ ದೇಶದಲ್ಲಿ ರಸ್ತೆ ಅಪಘಾತಗಳ ಪ್ರಮಾಣದಲ್ಲಿ ಗಮನಾರ್ಹ ಇಳಿಮುಖ ಕಂಡುಬಂದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಗುರುವಾರ ಲೋಕಸಭೆಗೆ ತಿಳಿಸಿದ್ದಾರೆ.
ಲಕ್ಷದ್ವೀಪದ ಎನ್‍ಸಿಪಿ ಸಂಸದ ಮೊಹಮ್ಮದ್ ಫೈಜಲ್ ಅವರು ಕೇಳಿದ ಪೂರಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2019 ದೇಶಾದ್ಯಂತ ರಸ್ತೆ ಅಪಘಾತಗಳಲ್ಲಿ ಗಮನಾರ್ಹ ಇಳಿಮುಖಕ್ಕೆ ಕಾರಣವಾಗಿದೆ ಎಂದು ಹೇಳಿದರು. ದೇಶಾದ್ಯಂತ ವಿವಿಧ ಹೆದ್ದಾರಿಗಳಲ್ಲಿ ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗುತ್ತಿರುವ ಅಪಘಾತ ಜಾಗಗಳನ್ನು ಗುರುತಿಸಲು ಸಂಬಂಧಪಟ್ಟ ಜಿಲ್ಲೆಗಳ ಸಂಸದರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲು ಸಚಿವಾಲಯ ಸೂಚಿಸಿದೆ. ಈ ಸಮಿತಿಯಲ್ಲಿ ಎಲ್ಲಾ ಸಂಸದರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಮತ್ತು ಕೇಂದ್ರ ಸರ್ಕಾರದ ಯೋಜನೆಯನ್ನು ಅನುಷ್ಠಾನಗೊಳಿಸಲು ಸಹರಿಸಬೇಕು ಎಂದು ಹೇಳಿದರು. ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಆಮ್ ಆದ್ಮಿ ಪಕ್ಷದ ಸದಸ್ಯ ಭಗವಂತ್ ಮಾನ್ ಅವರು, ಪಂಜಾಬ್‌ನ ವಿವಿಧ ಪ್ರದೇಶಗಳಲ್ಲಿ 138 ಭಾರಿ ಅಪಘಾತ ಸಂಭವಿಸುವ ಜಾಗಗಳಿವೆ. ಹೆದ್ದಾರಿಯಲ್ಲಿದ್ದ ಬಿಡಾಡಿ ದನಗಳಿಂದ ತಮ್ಮ ನಾಲ್ವರು ಸ್ನೇಹಿತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗಮನ ಸೆಳೆದರು.