ಸಹರಾನ್‌ಪುರ, ಫೆ 10, ಉತ್ತರ ಪ್ರದೇಶದ ಈ ಜಿಲ್ಲೆಯ ನಾಗ್ಲಾ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದೆಹಲಿಯ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ವಿದ್ಯಾ ಸಾಗರ್ ಮಿಶ್ರಾ ಸೋಮವಾರ ಇಲ್ಲಿ ತಿಳಿಸಿದ್ದಾರೆ. ದೆಹಲಿಯ ಪಂಜಾಬಿ ಬಾಗ್ ನಿವಾಸಿ ಕುಟುಂಬ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದರು. ಮದುವೆಯ ನಂತರ, ಕುಟುಂಬದ ಸದಸ್ಯರು ವಾಪಸ್ ಮನೆಗೆ ಹಿಂದಿರುಗುತ್ತಿದ್ದಾಗ, ಅವರಿದ್ದ ಕಾರು ಭಾನುವಾರ ರಾತ್ರಿ ಸುಬ್ರಿ ಕುಲುಮೆ ಬಳಿ ಮರದ ದಿಮ್ಮಿಗಳನ್ನು ತುಂಬಿದ ಟ್ರಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದಿದೆ.ಭಗವತಿ ಶರ್ಮಾ (55), ಅವರ ಪತ್ನಿ ಮಮತಾ (50), ಅವರ ಪುತ್ರ ಗೌರವ್ (28) ಮತ್ತು ಗೌರವ್ ಅವರ ಪತ್ನಿ ನಿಧಿ (24) ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಅವರ ಕಿರಿಯ ಪುತ್ರ ಪ್ರತೀಕ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.