ರಸ್ತೆ ಅಪಘಾತ: ಮೂವರು ಸ್ಥಳದಲ್ಲೇ ಸಾವು

Road accident: Three died on the spot

ಧಾರವಾಡ 20: ರಸ್ತೆ ಬದಿಯಲ್ಲಿ‌ ನಿಲ್ಲಿಸಿದ್ದ ವಾಹನಕ್ಕೆ ಬೆಳಗಾವಿ ಕಡೆಯಿಂದ ಧಾರವಾಡ ಕಡೆಗೆ ಅತಿ ವೇಗದಿಂದ ಬರುತ್ತಿದ್ದ ಬೈಕ್ ಡಿಕ್ಕಿ‌ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ತಾಲೂಕಿನ ಬೇಲೂರ ಬಳಿ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ಗುರುವಾರ (ಫೆ.20) ನಡೆದಿದೆ.

ತೀವ್ರವಾಗಿ ಗಾಯಗೊಂಡ ಮೂವರೂ ಸ್ಥಳದಲ್ಲಿಯೇ ಅಸುನೀಗಿದ್ದಾರೆ.

ಬೈಲಹೊಂಗಲ ಮೂಲದ ಧಾರವಾಡ ತಾಲೂಕಿನ ಕೋಟೂರು ಗ್ರಾಮದ ನಿವಾಸಿ ಮಹ್ಮದಜುಬೇರ ಜಮೀರ ಅಹ್ಮದ ಬಾಗೇವಾಡಿ (18), ಗದಗ ತಾಲೂಕಿನ ಜಗಾಪೂರ ಗ್ರಾಮದ, ಧಾರವಾಡ ತಾಲೂಕಿನ ಹೆಗ್ಗೇರಿ ನಿವಾಸಿ ಶಿವರಾಜ ಹನಮಪ್ಪ ಮುದಕಣ್ಣವರ (23) ಮತ್ತು ಧಾರವಾಡ ತಾಲೂಕಿನ ಕೋಟೂರು ಗ್ರಾಮದ ಇರ್ಫಾನ ಹುಸೇನಸಾಬ ಸಂಗೊಳ್ಳಿ (18) ಮೃತಪಟ್ಟ ಯುವಕರು.

ಘಟನಾ ಸ್ಥಳಕ್ಕೆ ಸಿಪಿಐ ಶಮೀರ ಮುಲ್ಲಾ ಮತ್ತು ಪಿಎಸ್ ಐ ಸಿದ್ರಾಮಪ್ಪ‌ ಉನ್ನದ ಭೇಟಿ ನೀಡಿದ್ದಾರೆ. ಈ‌ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ‌ ಮುಂದುವರೆಸಿದ್ದಾರೆ.