ರಸ್ತೆ ಸುರಕ್ಷತಾ ಸಮಿತಿ ಸಭೆ
ವಿಜಯಪುರ ಡಿಸೆಂಬರ್ 10 : ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಕಡ್ಡಾಯವಾಗಿ ರಸ್ತೆ ನಿಯಮಗಳ ಪಾಲನೆ ಮಾಡುವಂತೆ ಸೂಕ್ತ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಪಘಾತ ತಡೆಯುವ ಹಾಗೂ ಸುಗಮ ಸಂಚಾರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಜಾಗೃತಿ ಮೂಡಿಸಬೇಕು.
ಅನಗತ್ಯವಾದ ರೋಡ್ ಬ್ರೆಕ್ ಗಳನ್ನು ತೆಗೆಯಬೇಕು. ರಸ್ತೆ ತಿರುವುಗಳಲ್ಲಿ ಅಗತ್ಯ ಮಾಹಿತಿ ಹಾಗೂ ಸೂಚನಾ ಫಲಕ ಅಳವಡಿಸಬೇಕು. ಪದೇ-ಪದೇ ಅಪಘಾತಗಳು ಸಂಭವಿಸುವ ಪ್ರದೇಶ-ಸ್ಥಳಗಳಲ್ಲಿ ಎಚ್ಚರಿಕೆ ಮಾಹಿತಿ ವಿವರದ ಫಲಕ ಹಾಕಬೇಕು. ಮತ್ತು ಅಲ್ಲಿ ಅಪಘಾತಗಳು ಸಂಭವಿಸದಂತ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ನಗರದಲ್ಲಿ ಇಟಗಿ ಪೆಟ್ರೋಲ್ ಪಂಪ್‌ದಿಂದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದವರಗೆ ಸುಗಮ ಸಂಚಾರಕ್ಕಾಗಿ ಅಗತ್ಯ ಕಾರ್ಯ ಕೈಗೊಂಡು ಅನೂಕೂಲ ಕಲ್ಪಿಸಬೇಕು. ನಗರದಲ್ಲಿ ಸಂಚಾರದ ದಟ್ಟನೆ ಉಂಟಾಗದಂತೆ ನೋಡಿಕೊಳ್ಳಬೇಕು ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಗಳನ್ನು ಸಮರ್ಕವಾಗಿ ನಿಯಮಾನುಸಾರವಾಗಿ ನಿರ್ಮಿಸಬೇಕು. ರಸ್ತೆಯ ಮಧ್ಯದಲ್ಲಿ ಡ್ರೈನೆಜ್‌ಗಳಿದ್ದರೆ ಮಾಹಿತಿ ಫಲಕದ ಜೊತೆಗೆ ರಸ್ತೆ ನಿರ್ವಹಣೆ ಮಾಡಬೇಕು. ಹೊಸದಾಗಿ ನಿರ್ಮಾಣವಾಗಿರುವ ಸಿಸಿ ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆಯಾಗುವ ವಸ್ತುಗಳು ತೆರವುಗೊಳಿಸಬೇಕು ಎಂದು ಸೂಚಿಸಿದರು.
ಈಗಾಗಲೇ ಕಬ್ಬಿನ ಕಟಾವು ನಡೆಯುತ್ತಿರುವದರಿಂದ ಕಬ್ಬು ಸಾಗಿಸುವ ವಾಹನಗಳು ಹಾಗೂ ತೊಗರಿ ರಾಶಿ ಮಶಿನ್ ಗಳಿಗೆ ರೇಡಿಯಂ ಸ್ಟಿಕರ್ ಅಂಟಿಸಬೇಕು. ರಸ್ತೆಯಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆ ಹಾಗೂ ಆಸ್ಪತ್ರೆಗಳ ಸಹಾಯವಾಣಿ ಫಲಕ ಅಳವಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ, ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ, ಪೀಟರ್ ಅಲೆಕ್ಸಾಂಡರ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.