ರಸ್ತೆ ಸುರಕ್ಷತಾ ಜಾಗೃತಿ ಜಾಥಾ ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಿ - ಪ್ರಿಯಾಂಗ ಎಂ.
ಹುಬ್ಬಳ್ಳಿ 31: ವಾಹನ ಚಲಾಯಿಸುವಾಗ ಸಂಚಾರ ದೀಪಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಲು ಮುಂದಾಗಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗ್ ಎಂ. ಹೇಳಿದರು. ಇಂದು ವಿದ್ಯಾನಗರದ ಬಿ.ವಿ.ಬಿ ಕಾಲೇಜ್ ಹತ್ತಿರವಿರುವ ಬಿ.ಆರ್.ಟಿ.ಎಸ್ ಪಾಸ್ ಪಾಯಿಂಟ್ ಹತ್ತಿರ ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಿಭಾಗ, ಪ್ರಾದೇಶಿಕ ಸಾರಿಗೆ ಕಚೇರಿ, ಪೊಲೀಸ್ ಇಲಾಖೆ ಹಾಗೂ ಬಿ.ವಿ.ಬಿ ಕಾಲೇಜಿನ ಸಹಯೋಗದೊಂದಿಗೆ ಏರಿ್ಡಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಲ್ಲಿ ಸುಮಾರು 4.68 ಲಕ್ಷ ರಸ್ತೆ ಅಪಘಾತಗಳಾಗುತ್ತಿದ್ದು, ಈ ಅಪಘಾತಗಳಿಂದ ಸುಮಾರು 1.68 ಲಕ್ಷ ಜನ ಮೃತಪಟ್ಟಿದ್ದು, ಸುಮಾರು 4.53 ಲಕ್ಷ ಜನ ಗಾಯಾಳುಗಳಾಗಿದ್ದಾರೆ. ಗಾಯಾಳುಗಳಿಗೆ ಅವರು ಕುಟುಂಬಕ್ಕೆ ಗಳಿಸುತ್ತಿದ್ದ ಆದಾಯದ ಲೆಕ್ಕಾಚಾರದಲ್ಲಿ ಅಪಘಾತ ಪರಿಹಾರವನ್ನು ದೊರಕಿಸಿ ಕೊಡಲಾಗುತ್ತಿದೆ. ಆದರೆ ಕುಟುಂಬಕ್ಕೆ ಆಸರೆಯಾದ ಜೀವ ಇಲ್ಲ ಎಂಬ ಕೊರಗು ಅವರಿಗೆ ಕಾಡುತ್ತದೆ. ಇಂದು ತಂತ್ರಜ್ಞಾನ ಸಾಕಷ್ಟು ಬೆಳೆವಣಿಗೆ ಹೊಂದಿದರೂ ಸಹ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಿದ್ಯಾರ್ಥಿಗಳು, ಸಾರ್ವಜನಿಕರು ವಾಹನ ಓಡಿಸುವಾಗ ಜಾಗರೂಕತೆ ವಹಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು. ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಪ್ರಕಾಶ ತೆವಾರಿ ಮಾತನಾಡಿ, ವಿದ್ಯಾರ್ಥಿಗಳು ಬೈಕ್ ಚಲಾಯಿಸುವಾಗ ಎಚ್ವರಿಕೆ ವಹಿಸಬೇಕು. ಅವಸರದ ಪ್ರಯಾಣ ಪ್ರಾಣ ಹಾನಿಗೆ ಕಾರಣವಾಗುತ್ತದೆ. ಕಾರ ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರಬೇಕು ಎಂದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಮಾತನಾಡಿ, ಪ್ರತಿಯೊಬ್ಬ ನಾಗರಿಕ ರಸ್ತೆ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ಅತೀ ವೇಗದ ಪ್ರಯಾಣ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ವಾಹನ ಓಡಿಸುವಾದ ವೇಗದ ಮಿತಿ ನಿಯಂತ್ರಣದಲ್ಲಿ ಇರಬೇಕು. ಮದ್ಯಪಾನ ಸೇವಿಸಿ ವಾಹನ ಚಲಾಯಿಸಬಾರದು. ಸಾರಿಗೆ ಕಚೇರಿಯಲ್ಲಿ ಪ್ರತಿ ತಿಂಗಳು 600 ವಾಹನಗಳು ನೋಂದಣಿಯಾಗುತ್ತವೆ. ಒಂದು ವರ್ಷಕ್ಕೆ ಸುಮಾರು 32 ಸಾವಿರ ವಾಹನಗಳು ನೋಂದಣಿ ಆಗುವವು. ಅಪಘಾತದಿಂದ ಅಂಗವೈಕಲ್ಯ ಹಾಗೂ ಕುಟುಂಬಸ್ಥರಿಗೆ ತೊಂದರೆ ಆಗುತ್ತದೆ. ಹೀಗಾಗಿ ಸುರಕ್ಷತೆಯಿಂದ ವಾಹನವನ್ನು ಚಲಾಯಿಸಬೇಕು ಎಂದು ತಿಳಿಸಿದರು. ಸಹಾಯಕ ಪೊಲೀಸ್ ಆಯುಕ್ತರಾದ ವಿನೋದ ಮುಕ್ತೆದಾರ ಮಾತನಾಡಿ, ಪ್ರತಿಯೊಬ್ಬರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಚಾಲನಾ ಪತ್ರ ( ಡ್ರೈವಿಂಗ್ ಲೈಸೆನ್ಸ್) ಪಡೆಯುವುದು ತುಂಬಾ ಕಠಿಣ. ಅಪಘಾತಗಳು ಆಗದ ರೀತಿಯಲ್ಲಿ ವಾಹನ ಚಲಾಯಿಸಬೇಕು. ಅಪ್ರಾಪ್ತರಿಗೆ ವಾಹನವನ್ನು ಚಲಾಯಿಸಲು ನೀಡಬಾರದು. ಜೀವ ಅಮೂಲ್ಯವಾಗಿದ್ದು, ಅದನ್ನು ಕಳೆದುಕೊಳ್ಳಬೇಡಿ ಎಂದು ಮನವರಿಕೆ ಮಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾನಗರದ ಬಿ.ವಿ.ಬಿ ಕಾಲೇಜ್ ಹತ್ತಿರವಿರುವ ಬಿ.ಆರ್.ಟಿ.ಎಸ್ ಪಾಸ್ ಪಾಯಿಂಟ್‌ನಿಂದ ಕೋತಂಬ್ರಿ ಕಾಲೇಜಿನ ವೃತ್ತದವರೆಗೆ ರಸ್ತೆ ಸುರಕ್ಷತಾ ಜಾಥಾ ನಡೆಯಿತು. ಕಾರ್ಯಕ್ರಮದಲ್ಲಿ ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ಧಲಿಂಗೇಶ, ಎಸ್.ಡಿ.ಬೆಲ್ಲದ, ಜಿ.ವಿ.ದಿನಮಣಿ, ಗುರುಪ್ರಸಾದ, ಅಬ್ದುಲ್ ಸಲಾಂ ಧಾರವಾಡವಾಲೆ, ಶಂಕರ ಕಲಾಲ್, ಗೃಹ ರಕ್ಷಕದಳ ಸಿಬ್ಬಂದಿ, ಪೊಲೀಸ್ ಇಲಾಖೆ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಾರ್ವಜನಿಕರು ಭಾಗವಹಿಸಿದ್ದರು. ಬಿವಿಬಿ ಕಾಲೇಜಿನ ಪ್ರಾಧ್ಯಾಪಕರಾದ ರಂಜಿತಾ ನಿರೂಪಿಸಿ, ವಂದಿಸಿದರು.