ಇಂದು ನ್ಯಾಯಾಲಯಕ್ಕೆ ಗೌರಿ ಲಂಕೇಶ್ ಹತ್ಯೆ ಆರೋಪಿ ರಿಷಿಕೇಶ್

ಬೆಂಗಳೂರು, ಜ.13 ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಬಂಧಿತನಾಗಿರುವ ಪ್ರಮುಖ ಆರೋಪಿ ರಿಷಿಕೇಶ್ ದೇವ್ಡೇಕರ್ ಅಲಿಯಾಸ್ ಮುರಳಿಯನ್ನು ಇಂದು ಎಸ್ ಐಟಿ ತಂಡ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.

ಇದೇ ತಿಂಗಳು 9ರಂದು ಎಸ್ಐಟಿ ತಂಡ ಜಾರ್ಖಂಡ್ ನಲ್ಲಿ ರಿಷಿಕೇಶ್ ನನ್ನು ಬಂಧಿಸಿ, ಜಾರ್ಖಂಡ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಆತನನ್ನು ವಶಕ್ಕೆ ಪಡೆದಿತ್ತು. ಜಾರ್ಖಂಡ್ ನಿಂದ ರೈಲಿನ ಮೂಲಕ ರಿಷಿಕೇಶ್ ನನ್ನು ಎಸ್ ಐಟಿ ಅಧಿಕಾರಿಗಳು ಭಾನುವಾರ ರಾತ್ರಿ ಬೆಂಗಳೂರಿಗೆ ಕರೆತಂದಿದ್ದಾರೆ.  ಸುಮಾರು 36 ಗಂಟೆಗಳ ಬಳಿಕ‌ ರಿಷಿಕೇಶ್ ಬೆಂಗಳೂರಿಗೆ ತಲುಪಿದ್ದಾನೆ. ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ನಂತರ ರಿಷಿಕೇಶ್ ನನ್ನು ಎಸ್ ಐಟಿ ಮತ್ತೆ ವಶಕ್ಕೆ ಪಡೆಯಲಿದೆ.

ರಿಷಿಕೇಶ್ ಜಾರ್ಖಂಡ್ ನ ಧನ್ಬಾದ್ ಪೆಟ್ರೋಲ್ ಬಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದ್ದು, ಆತ ಸುಮಾರು 1 ವರ್ಷದಿಂದ ಕುಟುಂಬದವರ ಸಂಪರ್ಕದಿಂದ ದೂರವಿದ್ದ ಎಂಬ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಈತ ಕೂಡ ಪ್ರಮುಖ ಆರೋಪಿಯಾಗಿದ್ದು,ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ನಾಶಪಡಿಸಿದ್ದ ಎಂದು ತಿಳಿದು ಬಂದಿದೆ.ಇಂದು ಎಸ್ ಐಟಿ ತಂಡ ರಿಷಿಕೇಶ್ ನನ್ನು ವಶಕ್ಕೆ ಪಡೆದು, ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿ, ಹತ್ಯೆ ಕುರಿತು ವಿಚಾರಣೆ ನಡೆಸಲಿದೆ.