ಇಂಗ್ಲೆಂಡ್ ಫ್ಲೈಟ್ ಹತ್ತಿದ ರಿಷಭ್ ಪಂತ್

ನವದೆಹಲಿ, ಜೂನ್ 12:  ಹೆಬ್ಬೆರಳಿನ ಗಾಯದಿಂದ ಬಳಲುತ್ತಿರುವ ಶಿಖರ್ ಧವನ್ ಅವರ ಬದಲಿಗೆ ತಂಡ ಸೇರಿಕೊಳ್ಳಲು ರಿಷಭ್ ಪಂತ್ ಇಂಗ್ಲೆಂಡ್ ನ ವಿಮಾನವನ್ನು ಹತ್ತಿದ್ದು, ಇನ್ನು ಹದಿನೈದು ಜನರ ತಂಡ ಸೇರಲು ಕಾಯುವ ಅವಶ್ಯಕತೆ ಇದೆ.  

ಭಾರತ, ನ್ಯೂಜಿಲೆಂಡ್ ವಿರುದ್ಧ ಗುರುವಾರ ನಾಟಿಂಗ್ ಹ್ಯಾಮ್ ನಲ್ಲಿ ಪಂದ್ಯವನ್ನು ಆಡಲಿದ್ದು, ಪಂತ್ ಇದರೊಳಗೆ ಇಂಗ್ಲೆಂಡ್ ತಲುಪುತ್ತಾರೆ. ಆದರೆ, ಟೀಮ್ ಮ್ಯಾನೇಜ್ಮೆಂಟ್ ನಿರ್ಣಯದ ವರೆಗೂ ಅವರು ಕಾಯಲೇ ಬೇಕಾಗುತ್ತದೆ.  

ಐಸಿಸಿ ನಿಯಮದಂತೆ ಗಾಯಾಳು ಆಟಗಾರ ತಂಡದಿಂದ ಹೊರ ನಡೆದರೆ, ಆತನ ಗಾಯ ಚೇತರಿಕೆ ಗುಣಮುಖವಾದ ಮೇಲೆ ಅವನನ್ನು ತಂಡದಲ್ಲಿ ಸೇರಿಸಿಕೊಳ್ಳಲು ಆಗುವುದಿಲ್ಲ. ಹೀಗೇನಾದರು ಆಗಬೇಕಾದಲ್ಲಿ ಇನ್ನೋರ್ವ ಆಟಗಾರ ಗಾಯದಿಂದ ಹೊರ ನಡೆಯುವ ಅವಶ್ಯಕತೆ ಇದೆ.         

ಸದ್ಯ ಧವನ್ ಅವರನ್ನು ಟೀಮ್ ಮ್ಯಾನೇಜ್ಮೆಂಟ್ ವೀಕ್ಷಣೆಯಲ್ಲಿ ಇಟ್ಟಿದ್ದು, ಕಾದು ನೋಡುವ ತಂತ್ರಕ್ಕೆ ಮಣೆ ಹಾಕಿದೆ. ಧವನ್ ಅವರು ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿ, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.  

ಮಂಗಳವಾರ ಮೊದಲು ಧವನ್ ಗೆ ಮೂರು ವಾರಗಳ ವಿಶ್ರಾಂತಿಯ ಅವಶ್ಯಕತೆ ಇದೆ ಎಂದು ತಿಳಿಸಲಾಗಿತ್ತು. ಆದರೆ, ನಂತರ ಬಂದ ಸುದ್ದಿಯ ಅನುಸಾರ ಧವನ್ ಅವರಿಗೆ ಎರಡು ಪಂದ್ಯ ಹೊರಗಿಟ್ಟು ಕಾದು ನೋಡುವ ತಂತ್ರಕ್ಕೆ ಮ್ಯಾನೇಜ್ಮೆಂಟ್ ಮಣೆ ಹಾಕಿದೆ.  

ಎಡಗೈ  ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಧವನ್ ಅನುಪಸ್ಥಿತಿಯಲ್ಲಿ ಕೆ.ಎಲ್  ರಾಹುಲ್  ಆರಂಭಿಕರಾಗಿ ರೋಹಿತ್ ಶಮರ್ಾ ಅವರಿಗೆ ಸಾಥ್ ನೀಡುವುದನ್ನು  ನಿರೀಕ್ಷಿಸಲಾಗಿದೆ.  ದಿನೇಶ್ ಕಾರ್ತಿಕ  ಅಥವಾ ವಿಜಯ್ ಶಂಕರ್ 4ನೇ ಕ್ರಮಾಂಕದಲ್ಲಿ  ಕಾಣಿಸಿಕೊಳ್ಳುವ  ಸಾಧ್ಯತೆಯಿದೆ. ಭಾರತ ನಾಳೆ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದ್ದು,  ಮುಂದಿನ ಭಾನುವಾರ ಪಾಕಿಸ್ತಾನದ ವಿರುದ್ಧ ಕಾದಾಟ ನಡೆಸಲಿದೆ.