ಬೆಂಗಳೂರು, ಜೂನ್ 06,ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ. 37ನೇ ವಸಂತಕ್ಕೆ ಕಾಲಿಟ್ಟಿರುವ ರಕ್ಷಿತ್, ಕೊರೋನಾ ಲಾಕ್ ಡೌನ್ ಕಾರಣ ಸಿಂಪಲ್ ಆಗಿಯೇ ಹುಟ್ಟಿದ ಹಬ್ಬ ಆಚರಿಸಿಕೊಂಡಿದ್ದಾರೆ. ಮನೆಯಲ್ಲಿಯೇ ಕುಟುಂಬ ಸದಸ್ಯರ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಜಲ್ಲಿ ವೈರಲ್ ಆಗಿದೆ.ಇದೇ ವೇಳೆ ರಕ್ಷಿತ್ ಆತ್ಮೀಯ ಗೆಳೆಯ, ನಟ, ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಸುತ್ತಿದ್ದಾರೆ. “ಮಗಾ ಹ್ಯಾಪಿ ಬರ್ತಡೇ…. ನಿನ್ನ ಕೋಟಿ ಕನಸುಗಳೆಲ್ಲ ನನಸಾಗಲಿ ಅಷ್ಟೇ” ಎಂದು ರಿಷಬ್ ಹಾರೈಸಿದ್ದಾರೆ.
ನಟಿ ಸಂಯುಕ್ತಾ ಹೆಗಡೆ ರಕ್ಷಿತ್ ಜತೆಗಿರುವ ಫೋಟೊ ಶೇರ್ ಮಾಡಿದ್ದು, “ಹ್ಯಾಪಿ ಬರ್ತಡೇ ಸ್ಮಾರ್ಟಿ. ಕೀಪ್ ಇನ್ ಸ್ಪೈರಿಂಗ್” ಎಂದು ಬರೆದುಕೊಂಡಿದ್ದಾರೆ.ರಕ್ಷಿತ್ ಅಭಿನಯದ ಬಹುನಿರೀಕ್ಷೆಯ 777 ಚಾರ್ಲಿ ಸಿನಿಮಾದ ಕಡೆಯಿಂದ ಈಗಾಗಲೆ ಚಿತ್ರದ ಪೋಸ್ಟರ್ ಒಂದು ರಿಲೀಸ್ ಆಗಿದೆ. ನಾಯಿ ಮತ್ತು ಮನುಷ್ಯನ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಧರ್ಮ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ಧರ್ಮನ ಜೀವನ ಎನ್ನುವ ಮೇಕಿಂಗ್ ವಿಡಿಯೋ ರಿಲೀಸ್ ಆಗಲಿದೆ.777 ಚಾರ್ಲಿ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಚಿತ್ರಕ್ಕೆ ಕರಣ್ ರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೈಸೂರು ಹಾಗೂ ಉತ್ತರ ಪ್ರದೇಶದ ಕೆಲವು ಶೂಟಿಂಗ್ ದೃಶ್ಯ ಬಾಕಿಯಿದೆಯಂತೆ. ಪೋಸ್ಟರ್ ಗಳ ಮೂಲಕವೇ ಭಾರಿ ನಿರೀಕ್ಷೆ ಮೂಡಿಸಿರುವ ಚಾರ್ಲಿ, ಕೊರೋನಾ ಬಿಕ್ಕಟ್ಟು ಸುಧಾರಿಸಿದ ನಂತರ ಚಿತ್ರ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ. ಕನ್ನಡದ ಜತೆಗೆ ತಮಿಳು, ತೆಲುಗು ಮತ್ತು ಹಿಂದಿಯಲ್ಲಿಯೂ ಈ ಚಿತ್ರ ಬಿಡುಗಡೆಯಾಗಲಿದೆ ಎಂಬುದು ವಿಶೇಷ.