ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ : ರಮೇಶ ನಾಯ್ಕ
ಬ್ಯಾಡಗಿ 13: ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಮಕ್ಕಳು ಅವುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕ ರಮೇಶ ನಾಯ್ಕ ಹೇಳಿದರು. ಅವರು ತಾಲೂಕಿನ ಹಳೇ ಶಿಡೇನೂರು ಗ್ರಾಮದ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆಗಳ ಜಾಗೃತಿ ಹಾಗೂ ಸಲಹೆಗಳ ಬಗ್ಗೆ ಮಾತನಾಡಿದರು. ಮಕ್ಕಳು ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಂಡಾಗ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ಸಹಾಯವಾಗುತ್ತದೆ. ಜೀವನದಲ್ಲಿ ಚೈತನ್ಯದಿಂದ ಇರಬೇಕು. ಬೇರೆಯರ ಹಕ್ಕುಗಳನ್ನು ಉಲ್ಲಂಘಿಸಬಾರದು. ಸತ್ಯ ನಿಷ್ಠೆಯಿಂದ ಬದುಕು ಸಾಗಿಸಬೇಕು. ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098ಗೆ ಕರೆಮಾಡಿ ಮಾಹಿತಿ ನೀಡಬೇಕು ಎಂದರು. ಬಸ್ಗಳಲ್ಲಿ ಪ್ರಯಾಣಿಸುವಾಗ ಸುಖಾಸುಮ್ಮನೇ ಮೇಲೆ ಬೀಳುವುದು, ಸ್ಪರ್ಶಿಸುವವರ ವಿರುದ್ಧ ವಿದ್ಯಾರ್ಥಿನೀಯರು ಧ್ವನಿ ಎತ್ತಬೇಕು. ಅಪರಿಚಿತ ವ್ಯಕ್ತಿಗಳು ಡ್ರಾಪ್ ನೀಡುವುದಾಗಿ ಕರೆದರೆ ಹೋಗಬಾರದು.ಮಕ್ಕಳು ಶಿಸ್ತು ಮತ್ತು ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಶಾಲೆ, ಪಿಯುಸಿ ಮಟ್ಟದಲ್ಲಿ ಮೊಬೈಲ್ ಬಳಸಬಾರದು. ಪದವಿ ಶಿಕ್ಷಣಕ್ಕೆ ತೆರಳಿದಾಗ ಅಗತ್ಯಕ್ಕೆ ತಕ್ಕಂತೆ ಮೊಬೈಲ್ ಬಳಸಬೇಕು. ಎಲ್ಲರನ್ನು ಗೌರವದಿಂದ ಕಾಣಬೇಕು ಎಂದರು. ಈ ಸಂಧರ್ಭದಲ್ಲಿ ಶಾಲಾ ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು.