ಕೊಪ್ಪಳ 01: ಶರಣ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿನ ತಳಮಟ್ಟದ ಜನರನ್ನು ಮೇಲಕ್ಕೆತ್ತುವ ಕಾಯಕಕ್ಕಾಗಿ ಶ್ರಮಿಸಿದ ಕ್ರಾಂತಿ ಪುರುಷ ಮಡಿವಾಳ ಮಾಚಿದೇವರಾಗಿದ್ದರು ಎಂದು ಸಹಾಯಕ ಆಯುಕ್ತರಾದ ಸಿ.ಡಿ. ಗೀತಾ ಅವರು ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಇಂದು (ಫೆ.01) ಆಯೋಜಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲಾ ಮಹನೀಯರ ಶ್ರಮದ ಫಲಿತಾಂಶವೇ ಇಂದು ಸಮುದಾಯಗಳ ಪ್ರಗತಿಗೆ ನಾಂದಿಯಾಗಿದೆ. ಆದ್ದರಿಂದ ಸಮುದಾಯದಲ್ಲಿರುವ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಕೊಡಿಸುವುದು ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಸಂಗಮೇಶ ಕಲಹಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯ ಸದೃಢವಾಗಬೇಕಾದರೆ ಜನರು ಭಿನ್ನಾಭಿಪ್ರಾಯ ತೊರೆದು ಎಲ್ಲರೂ ಒಂದೇ ಎಂಬ ಸಹಬಾಳ್ವೆಯ ಭಾವದಿಂದ ಬದುಕಬೇಕು. ಸಮಾಜದಲ್ಲಿನ ಜನಸಾಮಾನ್ಯರು ಸನ್ಮಾರ್ಗದಲ್ಲಿ ನಡೆಯುವಂತ ಸಂದೇಶಗಳನ್ನು ನೀಡಿದ ಕೀತರ್ಿ ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಪರಮದೇವನಹಳ್ಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎ.ಆರ್. ಮಂಜುನಾಥ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಜಾತಿವ್ಯವಸ್ಥೆ ವಿರುದ್ಧ ಧ್ವನಿ ಎತ್ತಿ ಒಬ್ಬ ವ್ಯಕ್ತಿಯನ್ನು ಜಾತಿಯಿಂದ ಗುರುತಿಸದೆ ಬದುಕಿನ ಶೈಲಿಯಿಂದ ಗುರುತಿಸಬೇಕು ಎಂಬ ಕರೆ ನೀಡಿದ ಮೊದಲಿಗರು ಮಾಚಿದೇವರು. ದೇಹದ ಮೈಲಿಗೆ ಎಂಬ ಡಂಬಾಚಾರದ ಭಕ್ತಿಯನ್ನು ತೊರೆದು, ಶುದ್ಧ ಮನಸ್ಸಿನಿಂದ ಶರಣರನ್ನು ಆರಾಧಿಸಬೇಕು. ಪ್ರತಿಯೊಬ್ಬ ವ್ಯಕ್ತಿಯು ಅನುಭವಿಗಳ ಅನುಭವಗಳನ್ನು ಅರಿತು ಜೀವನ ಕಟ್ಟಿಕೊಳ್ಳಬೇಕು ಎಂಬ ನೀತಿಯನ್ನು ಸಾರಿದರು. ಬಡವರು, ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆಗೆ ಒಳಗಾದವರ ಬಗ್ಗೆ ಚಿಂತಿಸಿ ವ್ಯಕ್ತಿ ಮತ್ತು ವ್ಯಕ್ತಿಗಳ ಬಗ್ಗೆ ಇರುವ ಆತಂಕವನ್ನು ಹೋಗಲಾಡಿಸಲು ಪ್ರಮಾಣಿಕ ಪ್ರಯತ್ನ ಮಾಡಿದರು ಎಂದು ಮಾಚಿದೇವರ ಜೀವನ ಸಾಧನೆಗಳು ಕುರಿತು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷರಾದ ದುರುಗೇಶ ಜಿ. ಮಡಿವಾಳ, ಜಿಲ್ಲಾ ಮಡಿವಾಳ ಸಂಘದ ಕಾರ್ಯದಶರ್ಿ ವೆಂಕಟೇಶ ಮಡಿವಾಳ, ತಾಲೂಕು ಮಡಿವಾಳ ಸಂಘದ ಕಾರ್ಯದರ್ಶಿ ಮಹೇಶ ಮಡಿವಾಳ, ಮಡಿವಾಳ ಸಂಘದ ಸದಸ್ಯರಾದ ನಾಗರಾಜ ಮಡಿವಾಳ, ಶಂಕ್ರಪ್ಪ ಮಡಿವಾಳ, ಮಲ್ಲಿಕಾರ್ಜುನ ಮಡಿವಾಳ, ಕನಕಪ್ಪ ಮಡಿವಾಳ, ಮೂಕಪ್ಪ ಮಡಿವಾಳ, ತಿಮ್ಮಣ್ಣ ಮಡಿವಾಳ, ಬಸಪ್ಪ ಮಡಿವಾಳ ಸೇರಿದಂತೆ ಸಮುದಾಯದಾಯ ಬಾಂಧವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಸಿ.ವಿ. ಜಡಿಯವರ ಕಾರ್ಯಕ್ರಮ ನಡೆಸಿಕೊಟ್ಟರು. ಕಲಾವಿದರಾದ ಸದಾಶಿವ ಹಾಗೂ ತಂಡದವರು ನಾಡಗೀತೆ ಮತ್ತು ರೈತಗೀತೆ ಕಾರ್ಯಕ್ರಮ ನಡೆಸಿಕೊಟ್ಟರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಶ್ರೀ ಅಕ್ಕಮಹಾದೇವಿ ದೇವಸ್ಥಾನ (ಮಹೇಶ್ವರ ದೇವಸ್ಥಾನ) ದಿಂದ ಕೋಟೆ ರಸ್ತೆ ಗಡಿಯಾರ ಕಂಬದಿಂದ ಜವಾಹರ್ ರಸ್ತೆಯ ಮೂಲಕ ಸಾಹಿತ್ಯ ಭವನದವರೆಗೆ ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ನಡೆಯಿತು.