ಮಹಾನಗರ ಪಾಲಿಕೆಯಲ್ಲಿ ಆಸ್ತಿ ಕರದರ ಪರಿಷ್ಕರಣೆ: ಜಿಲ್ಲಾಧಿಕಾರಿ

ಬಳ್ಳಾರಿ,ಜೂ.02: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯ ಪರಿಷ್ಕರಣೆ ದರವನ್ನು ಕೆಎಂಸಿ ಕಾಯ್ದೆ 1976 ಅನುಸೂಚಿ 1ಕ್ಕೆ ಮಾಡಿದ ತಿದ್ದುಪಡಿ ನಿಯಮಾವಳಿಗಳು 1998ರ ನಿಯಮ 51ರ ಅನ್ವಯ ಆಸ್ತಿ ಕರದರಗಳನ್ನು ಮಾರ್ಪಡಿಸಿ ಪರಿಷ್ಕರಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಗಳು ಆಗಿರುವ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.

      ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೋವಿಡ್ ಪೂರ್ವದಲ್ಲಿ ಖಾಲಿ ನಿವೇಶನಕ್ಕೆ ಶೇ.25ರಷ್ಟು ಆಸ್ತಿ ಕರದರ ನಿಗದಿಪಡಿಸಲಾಗಿತ್ತು 2021ನೇ ಸಾಲಿಗೆ  ಪರಿಷ್ಕರಿಸಲಾದ ಆಸ್ತಿ ತೆರಿಗೆ ದರ ಶೇ.25. ವಸತಿ ಕಟ್ಟಡಗಳಿಗೆ ಕೋವಿಡ್ ಪೂರ್ವದಲ್ಲಿ ಶೇ.20ರಷ್ಟು ನಿಗದಿಪಡಿಸಲಾಗಿತ್ತು. 2020-21ನೇ ಸಾಲಿಗೆ ಶೇ.15ರಷ್ಟು ಇಳಿಸಲಾಗಿದೆ. ವಾಣಿಜ್ಯ/ಕೈಗಾರಿಕಾ ಕಟ್ಟಡಗಳಿಗೆ ಕೋವಿಡ್ ಪೂರ್ವದಲ್ಲಿ ಶೇ.25ರಷ್ಟು ನಿಗದಿಪಡಿಸಲಾಗಿತ್ತು;ಅದನ್ನು ಶೇ.20ಕ್ಕೆ ಇಳಿಸಲಾಗಿದೆ.

     ಕೋವಿಡ್19 ರೋಗದಿಂದಾಗಿ ಅಥರ್ಿಕ ನಷ್ಟವುಂಟಾಗಿರುವುದರಿಂದ ಸಾರ್ವಜನಿಕರಿಗೆ ಹೊರೆಯನ್ನು ತಗ್ಗಿಸಲು ಕೆಲ ಸಂಘ-ಸಂಸ್ಥೆಗಳಿಂದ ಮನವಿ ಬಂದಿದ್ದ ಹಿನ್ನೆಲೆ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಈಗಾಗಲೇ ಆಸ್ತಿ ತೆರಿಗೆ ದರ ಮರುಪರಿಷ್ಕರಿಸಿ ತೆರಿಗೆ ಕಡಿಮೆ ಮಾಡಲಾಗಿದ್ದು, ಅದರಂತೆ ನಮ್ಮ ಪಾಲಿಕೆ ವ್ಯಾಪ್ತಿಯಲ್ಲಿ ಕೂಡ ಪರಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.